ಬಳ್ಳಾರಿ: ಸಮಾಜದಲ್ಲಿ ಸಂವಿಧಾನ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವುಂಕಿ ಸಾನಾ ರುದ್ರಪ್ಪ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ರಜನಿ ಕುಮಾರಿ ಮಾಹಿತಿ ನೀಡಿದರು. ವುಂಕಿ ಸಾನ ರುದ್ರಪ್ಪ ಕಾನೂನು ಕಾಲೇಜು ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಕುರಿತು ಅರಿವು ಮೂಡಿಸುವ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂವಿಧಾನವೇ ಈ ದೇಶದ ಮೂಲ ಕಾನೂನು. ಭಾರತದ ಎಲ್ಲಾ ನಾಗರಿಕರು ಸಂವಿಧಾನ, ಪ್ರಜಾಪ್ರಭುತ್ವ, ಮತದಾನದ ಮಹತ್ವವನ್ನು ಕಲಿತರೆ ಮಾತ್ರ ನಾವು ಪ್ರಬುದ್ಧ ಭಾರತವನ್ನು ನೋಡಬಹುದು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು. ನಂತರ ನಗರದ ಬಳ್ಳಾರಿ ಬಿಸಿನೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನದ ವಿಶೇಷ ಉಪನ್ಯಾಸದಲ್ಲಿ ಕಾಲೇಜಿನ ಪ್ರಚಾರಕ ಡಾ. ಎಂ.ರಾಮಚಂದ್ರ ಮಾತನಾಡಿ, ಸಂವಿಧಾನ ಒಂದೇ ಜಾತಿ, ಧರ್ಮಕ್ಕೆ ಸಂಬಂಧಿಸಿಲ್ಲ. ಎಲ್ಲ ವರ್ಗದವರ ಬಗ್ಗೆ ಕಾಳಜಿ ಇದ್ದು, ಸಂವಿಧಾನ ಉಳಿಸಿ, ಬೆಳೆಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಕೊಟ್ರೇಶ್, ಸ್ವಪ್ನಾ, ವೀರಾರೆಡ್ಡಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.