ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಕಲಾಪವನ್ನು ಮುಂದೂಡಿದರೂ ಸದನದ ಬಾವಿಗಿಳಿದ ನಾಯಕರು ಕೈ, ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ.
ವಿಧಾನಪರಿಷತ್‌ನಲ್ಲಿ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರ ಅವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪದ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ವೇಳೆ ಹಾಗೇ ಯಾರೂ ಘೋಷಣೆ ಕೂಗಿಲ್ಲ ಎಂದು ಸಲೀಂ ಅಹ್ಮದ್ ಉತ್ತರಿಸಿದರು. ಇದಕ್ಕೆ ಕೋಪಗೊಂಡ ಬಿಜೆಪಿ ಸದಸ್ಯ ರವಿಕುಮಾರ್ ಅವರು ಈ ಸರ್ಕಾರ ಆಡಳಿತ ನಡೆಸೋದಕ್ಕೆ ನಾಲಾಯಕ್ ಸರ್ಕಾರ, ಅಯೋಗ್ಯ ಸರ್ಕಾರ ಎಂದು ಹೇಳಿದರು.
ಸರ್ಕಾರದ ವಿರುದ್ಧ ಎನ್.ರವಿಕುಮಾರ್ ಅಬ್ಬರಿಸುವಾಗ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ವಾಗ್ದಾಳಿ ನಡೆಸಿದರು. ಆಗ ಅಬ್ದುಲ್ ಜಬ್ಬಾರ್ ವಿರುದ್ಧ ಬಿಜೆಪಿ ಸದಸ್ಯರು ಸಿಡಿದೆದ್ದು ಸದನದ ಬಾವಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಏಕವಚನ ಪ್ರಯೋಗ ಮಾಡಿದ್ದಕ್ಕೆ ಬಿಜೆಪಿಯ ಸದಸ್ಯ ತುಳಸಿ ಮುನಿರಾಜು ಗೌಡ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಸದನ ಬಾವಿಗೆ ಬಂದ ಮಾರ್ಷಲ್‌ಗಳು ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಿದರು.