ಮೈಸೂರು : ನಗರದ ಎನ್.ಆರ್. ಮೊಹಲ್ಲಾ, ಶಿವಾಜಿ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ದಿವಂಗತ ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ೫೦ ಹಾಸಿಗೆಗಳ ಶ್ರೀನಿವಾಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮಾರ್ಚ್ ೧ ರಂದು ಉದ್ಘಾಟಿಸಲಿದ್ದಾರೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ವೆಂಕಟೇಶ್ ಗಂಧನಹಳ್ಳಿ ತಿಳಿಸಿದರು. ನಗರದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಸ್ಪತ್ರೆ ಪ್ರಾರಂಭಿಸ ಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿದ್ದು, ಚಿಕಿತ್ಸೆಗೆ ತಗಲುವ ವೆಚ್ಚವನ್ನು ಆಸ್ಪತ್ರೆ ಮುಂದೆ ಪ್ರಕಟಿಸಲಾಗುವುದು ಎಂದರು. ಕಾಗಿನೆಲೆ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಯನ್ನು ಉದ್ಘಾಟಿಸುವರು.
ಶಾಸಕ ತನ್ವೀರ್ ಸೇಠ್, ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಚೆಲುವರಾಯ ಸ್ವಾಮಿ, ಕೆ. ವೆಂಕಟೇಶ್, ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಡಿ. ರವಿಶಂಕರ್, ಕೆ.ಹರೀಶ್‌ಗೌಡ, ಅನೀಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್ ಸೇರಿದಂತೆ ಇನ್ನಿತರ ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಎಲ್ಲರಿಗೂ ಕೈಗೆಟುಕುವ ವೆಚ್ಚದಲ್ಲಿ ಗುಣಾತ್ಮಕ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದ ರಾಕೇಶ್ ಸಿದ್ದರಾಮಯ್ಯ ಸ್ಮಾರಕ ಶ್ರೀನಿವಾಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಇದರಿಂದ ಮೈಸೂರು ಕೇವಲ ಯೋಗ, ಅರಮನೆ, ಸಾಂಸ್ಕೃತಿಕ ನಗರಿಯಾಗಿರದೇ ಭವಿಷ್ಯದಲ್ಲಿ ಆರೋಗ್ಯ ನಗರಿಯಾಗಿಯೂ ಪರಿವರ್ತನೆಯಾಗುತ್ತಿದೆ ಎಂದು ತಿಳಿಸಿದರು.