ಕಲಬುರಗಿ: ಖ್ಯಾತ ವಾಗ್ಮಿ, ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಜಿಲ್ಲೆ ಪ್ರವೇಶ ನಿರ್ಬಂಧಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆ ಪ್ರವೇಶಿಸಿದರೆ ಶಾಂತಿ ಕದಡುತ್ತಾರೆಂದು ಹಾಗೂ ಕಾನೂನ ವ್ಯವಸ್ಥೆ ಹಾಳಾಗಬಹುದು ಎಂಬ ನಿಟ್ಟಿನಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಫೆ.29 ರಿಂದ ಮಾರ್ಚ 4ರವರೆಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಕಲಬುರಗಿ ಸಹಾಯಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ಬೀದರ್ ದಿಂದ ಬುಧವಾರ ಮಧ್ಯ ರಾತ್ರಿ ಕಲಬುರಗಿಗೆ ಬರುತ್ತಿರುವಾಗ ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ. ನಿನ್ನೆ ರಾತ್ರಿ ಚಕ್ರವರ್ತಿ ಸೂಲಿಬೆಲೆ ಬೀದರ್ ಜಿಲ್ಲೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸುಮಾರು ರಾತ್ರಿ 12 ಗಂಟೆಗೆ ಕಲಬುರಗಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆ ಪ್ರವೇಶದ ಕಿಣ್ಣಿ ಸಡಕ ಗ್ರಾಮದಲ್ಲಿ ನೂರಾರು ಪೊಲೀಸರ ತಂಡವು ಬಂದು ತಡೆಯೊಡ್ಡಿದೆ.
ರಾತ್ರಿ ಸುಮಾರು 2 ಗಂಟೆವರೆಗೆ ತಡೆ ಹಿಡಿದು ನಂತರ ಸಮೀಪದ ಹಳ್ಳಿಖೇಡ ಗ್ರಾಮದಲ್ಲಿ ರಾತ್ರಿ ವಿಶ್ರಾಂತಿ ಪಡೆದಿದ್ದಾರೆ.
ಗುರುವಾರ ಫೆ. 29 ರಂದು ಇಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ್ ಮಂಟಪದಲ್ಲಿ ನಮೋ ಬ್ರಿಗೇಡ್ ಚಿತ್ತಾಪುರ ವತಿಯಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮ ಭಾಗವಹಿಸಬೇಕಿತ್ತು.
ಕಳೆದ ತಿಂಗಳು ರಾಯಚೂರು ಜಿಲ್ಲೆಯ ಶಿರವಾರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾತಿ ನಿಂದನೆ ನಿಟ್ಟಿನಲ್ಲಿ ಮಾತನಾಡಿದ್ದಾರೆಂದು ಠಾಣೆಗೆ ದೂರು ಸಹ ಸಲ್ಲಿಸಲಾಗಿತ್ತು.
ತದನಂತರ ಸೂಲಿಬೆಲೆ ಅವರು ನ್ಯಾಯಾಲಯ ಮೊರೆ ಹೋಗಿ ತಮ್ಮ ವಿರುದ್ದ ದಾಖಲಾದ ಎಫ್ಐಆರ್ ಗೆ ತಡೆ ತಂದಿದ್ದರು. ಇದೀಗ ಕಲಬುರಗಿ ಜಿಲ್ಲೆ ಪ್ರವೇಶಿದಂತೆ ನಿರ್ಬಂಧ ಹೇರಲಾಗಿದೆ.