ಬೇಸಿಗೆಯ ಬಿರುಬಿಸಿಲು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳನ್ನೂ ಕಂಗೆಡಿಸುತ್ತಿದೆ.
ಪರಿಸರದಲ್ಲಿ ನೈಸರ್ಗಿಕವಾಗಿ ಪ್ರಾಣಿ ಪಕ್ಷಿಗಳ ದಾಹ ತಣಿಸುತ್ತಿದ್ದ ನೀರಿನ ಒರತೆಗಳು ಬತ್ತಿಹೋಗಿ ಅವು ನೀರನ್ನು ಅರಸುತ್ತಾ ಅಲೆಯುವ ಪರಿಸ್ಥಿತಿ ಉಂಟಾಗಿದೆ.
ವನ್ಯಜೀವಿ ಛಾಯಾಗ್ರಾಹಕರಾದ ಜಿ.ಎಸ್.ರವಿಶಂಕರ್ ಅವರು ಮೈಸೂರಿನ ಜೆ.ಪಿ.ನಗರದ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿ ಇಡುತ್ತಿದ್ದಾರೆ.
ಅಲ್ಲಿಗೆ ಬರುವ ಬಗೆಬಗೆಯ ಪಕ್ಷಿಗಳು ನೀರು ಕುಡಿದು, ಸ್ನಾನ ಮಾಡಿ ಸಂತಸದ ಸಂಗೀತ ಹಾಡುತ್ತಾ ಹಾರುತ್ತಿವೆ.
ರೆಡ್ ವಿಸ್ಕರ್ಡ್ ಬುಲ್ ಬುಲ್ ಎಂದು ಕರೆಯಲ್ಪಡುವ ಕೆಮ್ಮೀಸೆ ಪಿಕಳಾರ ಹಕ್ಕಿಯೊಂದು ನೀರು ಕುಡಿದು, ಅಲ್ಲೇ ಸ್ನಾನ ಮಾಡಿ ಖುಷಿಪಡುತ್ತಿರುವ ದೃಶ್ಯವನ್ನು ಸ್ವತಃ ರವಿಶಂಕರ್ ಸೆರೆ ಹಿಡಿದಿದ್ದಾರೆ.
ರವಿಶಂಕರ್ ಪುತ್ರ ಪ್ರಜ್ವಲ್ ಸಹಾ ಪರಿಸರ ಪ್ರೇಮಿಯಾಗಿದ್ದು ದಿನಕ್ಕೆ ಎರಡು ಮೂರು ಬಾರಿ ನೀರು ಬದಲಿಸಿ ಹಕ್ಕಿಗಳ ದಾಹ ತಣಿಸುವ ಮೂಲಕ ನಿಸರ್ಗ ಜೀವಿಗಳಿಗೆ ನೆರವಾಗುತ್ತಿದ್ದಾನೆ.
ಇತರರೂ ಸಹ ತಮ್ಮ ಮನೆಗಳ ಮುಂಭಾಗ ಹಾಗೂ ಮೇಲ್ಭಾಗದಲ್ಲಿ ನೀರು ತುಂಬಿಸಿಟ್ಟು ಪ್ರಣಿ ಪಕ್ಷಿಗಳ ಬಾಯಾರಿಕೆ ನೀಗಿಸಲು ಮುಂದಾಗಬೇಕು ಎಂಬುದು ರವಿಶಂಕರ್ ಮನವಿಯಾಗಿದೆ