ಮೈಸೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರು ದೇಶ ದ್ರೋಹಿಗಳು. ಈ ದೇಶದ ಅನ್ನ ತಿಂದು, ನೀರು ಕುಡಿದ ಪಕ್ಕದ ದೇಶದ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಿಡಿಕಾರಿದರು.
ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಭೇಟಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇಶದ ಸೈನಿಕರು ತಮ್ಮ ಜೀವಗಳನ್ನು ತ್ಯಾಗ ಮಾಡಿ ದೇಶದ ಗಡಿ ಕಾಯುತ್ತಿದ್ದಾರೆ. ಅಂತಹವರನ್ನೂ ಘೋಷಣೆ ಕೂಗಿ ಅವಮಾನ ಮಾಡಿದ್ದಾರೆ ಘೋಷಣೆ ಕೂಗಿದವರನ್ನು ಸಮರ್ಥಿಸುವ ರೀತಿ ಕಾಂಗ್ರೆಸ್ ನಾಯಕರ ಹೇಳಿಕೆ ಸರಿಯಲ್ಲ ಎಂದರು.

ಬಿ.ಕೆ. ಹರಿಪ್ರಸಾದ್ ಅವರು ಪಾಕ್ ಕಂಡರೆ ಬಿಜೆಪಿಯವರಿಗೆ ಮಾತ್ರ ಶತ್ರುತ್ವ. ನಮಗೆ ಕೇವಲ ನೆರೆ ದೇಶ ಎಂಬ ಹೇಳಿಕೆ ಅವರ ನಿರಭಿಮಾನ ತೋರಿಸುತ್ತದೆ. ಬಿಜೆಪಿ ವಿರೋಧಿಸುವ ಭರದಲ್ಲಿ ದೇಶದ ಭದ್ರತೆ ಮತ್ತು ಹಿತವನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದ್ದಾರೆ.
ತಮ್ಮ 60 ವರ್ಷಗಳ ಸುದೀರ್ಘ ರಾಜಕೀಯದ ಕುರಿತು ಶ್ರೀನಿವಾಸ ಪ್ರಸಾದ್ ಪುಸ್ತಕ ಬರೆದಿದ್ದು, ಪುಸ್ತಕ ಹೊರ ತರುವ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿರುವ ಸಂದರ್ಭದಲ್ಲೇ ಭಾಸ್ಕರ್ ರಾವ್ ಭೇಟಿ ಮಾಡಿದ್ದಾರೆ. ಈ ವೇಳೆ ಶ್ರೀನಿವಾಸ ಪ್ರಸಾದ್ ಅವರನ್ನು ಭಾಸ್ಕರ್ ರಾವ್ ಸನ್ಮಾನಿಸಿ ಗೌರವಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಭಾಸ್ಕರ್ ರಾವ್, ಮೈಸೂರು ಭಾಗದ ಪ್ರಭಾವಿ ದಲಿತ ನಾಯಕರನ್ನ ಸೌಜನ್ಯಯುತವಾಗಿ ಭೇಟಿ ಮಾಡುತ್ತಿದ್ದಾರೆ.