ಪಾಂಡವಪುರ : ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು-ಗುಬ್ಬಿ ಮಧ್ಯೆ ಬೆಣಚಿಗೆರೆ ರೈಲ್ವೆ ಕ್ರಾಸ್‌ನಲ್ಲಿ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ೭೩ರಿಂದ ಬೆಣಚಿಗೆರೆಗೆ ವೇಗವಾಗಿ ಹೋಗುತ್ತಿದ್ದ ಬೈಕ್ ಮುಚ್ಚಿದ್ದ ರೈಲ್ವೆ ಗೇಟ್‌ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಪಾಂಡವಪುರ ತಾಲ್ಲೂಕು ಚಿನಕುರಳಿ ಹೋಬಳಿ ಕುಂಬಾರಕೊಪ್ಪಲು ಗ್ರಾಮದ ರುದ್ರಶೆಟ್ಟಿ ಅವರ ಮಗ ಶ್ರೀಕಂಠ (೩೫) ಎಂದು ಗುರುತಿಸಲಾಗಿದೆ.
ಮೃತ ಶ್ರೀಕಂಠ ಟ್ರೈವರ್ ಆಗಿದ್ದು, ಕೆ.ಆರ್.ಪೇಟೆ ತಾಲ್ಲೂಕು ತೆಂಡೇಕೆರೆ ಗ್ರಾಮದ ಬಳಿಯ ಫೀಡ್ಸ್ ಕಾರ್ಖಾನೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಫೀಡ್ಸ್ ಲೋಡ್ ಮಾಡಿಕೊಂಡು ಗುಬ್ಬಿಗೆ ಅನ್‌ಲೋಡ್ ಮಾಡಲು ಹೋಗಿದ್ದನು. ಬುಧವಾರ ಮುಂಜಾನೆ ತನ್ನ ವಾಹನ ನಿಲ್ಲಿಸಿ ಮತ್ತೊಬ್ಬ ಪರಿಚಿತರ ಬೈಕ್ ಪಡೆದು ಹೋಟೆಲ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತ ಶ್ರೀಕಂಠ ಈ ಹಿಂದೆ ಬೇಬಿಬೆಟ್ಟದ ಕ್ರಶರ್‌ವೊಂದರಲ್ಲಿ ಟಿಪ್ಪರ್ ಲಾರಿ ಚಾಲನೆ ಮಾಡುತ್ತಿದ್ದನು. ಸರ್ಕಾರ ಮತ್ತು ಹೈಕೋರ್ಟ್ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತ ಮಾಡಿದ ಬಳಿಕ ಉದ್ಯೋಗವಿಲ್ಲದೆ ಸರಕು ಸಾಗಾಣಿಕೆ ವಾಹನ ಚಾಲನೆ ಮಾಡುತ್ತಿದ್ದು, ಅಪಘಾತದಲ್ಲಿ ಮೃತಪಟ್ಟಿದ್ದಾನೆ.