Monday, April 21, 2025
Google search engine

Homeಸ್ಥಳೀಯವಿವಿಗಳಲ್ಲೇ ಕನ್ನಡ ಅಧ್ಯಾಪಕರ ಕೊರತೆ: ಡಾ.ಕೆ.ತಿಮ್ಮಯ್ಯ

ವಿವಿಗಳಲ್ಲೇ ಕನ್ನಡ ಅಧ್ಯಾಪಕರ ಕೊರತೆ: ಡಾ.ಕೆ.ತಿಮ್ಮಯ್ಯ


ಮೈಸೂರು: ಅನೇಕ ವಿಶ್ವವಿದ್ಯಾನಿಲಯಗಳು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿಯೇ ಹಳಗನ್ನಡ-ನಡುಗನ್ನಡ ಪಾಠ ಮಾಡುವ ಅಧ್ಯಾಪಕರ ಕೊರತೆಯಿದೆ ಎಂಬ ದೂರು ಆಗಾಗ ಕೇಳಿಬರುತ್ತಿರುವುದು ನೋವಿನ ಸಂಗತಿ ಎಂದು ನಗರದ ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಕೆ.ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹಳಗನ್ನಡ-ನಡುಗನ್ನಡ ಕಾವ್ಯಗಳ(ಆಯ್ದ ಭಾಗಗಳ) ಓದು ಮತ್ತು ವ್ಯಾಖ್ಯಾನ ಕುರಿತ ಹದಿನೈದು ದಿನಗಳ ಆಡ್‌ಆನ್ ಕೋರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಳಗನ್ನಡ-ನಡುಗನ್ನಡ ಯಾರಿಗೂ ಬೇಡವಾದ ವಿಚಾರವಾಗುತ್ತಿರುವುದು ವಿಷಾದದ ಸಂಗತಿ. ಹಳಗನ್ನಡ ಎಂದರೆ ಕಬ್ಬಿಣದ ಕಡಲೆ, ಅದನ್ನು ಸುಲಭವಾಗಿ ಓದಲಿಕ್ಕಾಗಲ್ಲ, ಅರ್ಥ ಮಾಡಿಕೊಳ್ಳಲಾಗಲ್ಲ. ಹಾಗಾಗಿ ಐಚ್ಛಿಕ ಕನ್ನಡವನ್ನು ತೆಗೆದುಕೊಳ್ಳುವುದೇ ಬೇಡ ಎಂದು ವಿದ್ಯಾರ್ಥಿ ಸಮುದಾಯದಲ್ಲಿ ಚರ್ಚೆ ಆಗುತ್ತಿರುವುದನ್ನು ಕೂಡ ನಾನು ಕೇಳಿದ್ದೇನೆ. ಈ ಮನೋಭಾವ ಏಕೆ ಎಂಬುದು ಅರ್ಥವಾಗುತ್ತಿಲ್ಲ. ನಾವೆಲ್ಲ ಕನ್ನಡಿಗರು. ಮಾತೃಭಾಷೆಯೇ ಕನ್ನಡ. ಕನ್ನಡವೇ ಅರ್ಥವಾಗಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.
ಈ ರೀತಿಯ ಮನೋವೃತ್ತಿ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ನನ್ನ ಪ್ರಕಾರ ಈ ಮನೋವೃತ್ತಿ ನಮ್ಮದಲ್ಲ, ಯಾರೋ ನಮ್ಮ ಮೇಲೆ ಹೇರಿರುವುದು. ಹಾರೋ ಹೆದರಿಸಿರೋದು. ಗುಮ್ಮ ಬಂತು ಗುಮ್ಮ ಅನ್ನೋ ರೀತಿಯಲ್ಲಿ ಒಬ್ಬರಿಗೊಬ್ಬರು ಪ್ರಚಾರ ಮಾಡಿಕೊಂಡು ಇವತ್ತು ಹಳಗನ್ನಡ ಅಂದರೇನೇ ಹಿಂದೆ ಸರಿಯೋ ರೀತಿ ಆಗಿದೆ. ಇದು ಸರಿಯಲ್ಲ ಎಂದರು.
ಸಾಹಿತ್ಯ ಬೇರೆಲ್ಲಾ ಶಾಸ್ತ್ರ, ಜ್ಞಾನ ಶಿಸ್ತುಗಳಿಗಿಂತ ಅತ್ಯಂತ ಆಪ್ತವಾಗಿ ಹೃದಯ ಸಂವಾದದ ಮೂಲಕ ನಿಮ್ಮನ್ನು ಬಹುಮುಖಿ ಚಿಂತನೆಗೆ ಒಳಪಡಿಸಿ ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಹಳಗನ್ನಡ ಮತ್ತು ನಡುಗನ್ನಡ ಅಧ್ಯಯನದಿಂದ ವಿದ್ಯಾರ್ಜನೆ ಜೊತೆಗೆ ವಿವೇಕವೂ ಬೆಳಯುತ್ತದೆ ಎಂದು ವಿವರಿಸಿದರು.
ವಾಣಿಜ್ಯಶಾಸ್ತ್ರ್ರ, ನಿರ್ವಹಣಾ ಶಾಸ್ತ್ರ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳಿಗೆ ಸಾಹಿತ್ಯ ಓದಿ ಏನಾಗಬೇಕು ಎಂಬ ಪ್ರಶ್ನೆಯೂ ಅಲ್ಲಲ್ಲಿ ಚರ್ಚಿತವಾಗುತ್ತಿದೆ. ನಿಮ್ಮಿಷ್ಟದಂತೆ ಯಾವುದನ್ನಾದರೂ ಓದಿ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ನಾವು ಮನುಷ್ಯರಲ್ಲವೇ? ನಮ್ಮ ಬಾಳು ಯಾವುದೋ ಒಂದು ಶಾಖೆ-ಶಿಸ್ತಿನಿಂದ ಪರಿಪೂರ್ಣವಾಗಲು ಸಾಧ್ಯವಿಲ್ಲ. ಎಲ್ಲ ಶಿಸ್ತುಗಳೂ ದಕ್ಕಬೇಕು. ಮುಖ್ಯವಾಗಿ ಸಾಹಿತ್ಯದ ಸಂಸ್ಕಾರ ದೊರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚೆಗೆ ಓದುವುದು ಕೆಲಸ ಗಿಟ್ಟಿಸಲಿಕ್ಕಷ್ಟೇ ಎಂಬ ಮನಸ್ಥಿತಿಯೂ ಇದೆ. ಇಂದು ಪಠ್ಯವನ್ನು ಸಾರ ಸಂಗ್ರಹವಾಗಿ ಓದೋ ಬದಲು ಪರೀಕ್ಷೆ ಕೇಂದ್ರಿತವಾಗಿ ಓದುವ ಸೀಮಿತತೆಗೆ ಬಂದು ತಲುಪಿದ್ದೇವೆ. ಅಂಕಗಳಿಕೆಯಷ್ಟೇ ಮುಖ್ಯವಾಗುತ್ತಿದೆ. ಈ ಮನಸ್ಥಿತಿ ಬದಲಾಗಬೇಕು. ನೆನಪಿನ ಶಕ್ತಿಯ ಪರೀಕ್ಷೆಯೋ, ಜ್ಞಾನದ ಪರೀಕ್ಷೆಯೋ ಅನ್ನೋ ಪ್ರಶ್ನೆಯಿದೆ. ಮುಖ್ಯವಾಗಿ ಬುದ್ಧಿಮಟ್ಟದ ಪರೀಕ್ಷೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಐತಿಹಾಸದ ಅರಿವಿದ್ದಾಗ ಮಾತ್ರ ವರ್ತಮಾನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಸಾಧ್ಯ. ಯಾರು ಇತಿಹಾಸ ಮತ್ತು ವರ್ತಮಾನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ತಾರೋ, ಅವರಿಗೆ ಭವಿಷ್ಯತ್ ಏನು ಎಂಬುದು ಸ್ಪಷ್ಟವಾಗಿ ಕಾಣಿಸುತ್ತೆ. ಇಂಥವರನ್ನೇ ನಾವು ತ್ರಿಕಾಲ ಜ್ಞಾನಿಗಳು ಅಂತ ಕರೆಯೋದು. ಪ್ರತಿಯೊಬ್ಬರೂ ತ್ರಿಕಾಲ ಜ್ಞಾನಿಗಳಾಗಲಿಕ್ಕೆ ಸಾಧ್ಯ ಎಂದರು.
ಇತಿಹಾಸಕಾರನಿಗೆ ಬಹಳಷ್ಟು ಮಿತಿಗಳಿವೆ. ಹಾಗಾಗಿ ಆತ ಪರಿಪೂರ್ಣವಾಗಿ ಸತ್ಯಸಂಗತಿ ಹೇಳಲಾರ. ಆದರೆ ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಒಳಗೊಂಡ ಇತಿಹಾಸವನ್ನು ಕೊಡಲಿಕ್ಕೆ ಸಾಧ್ಯ ಇರುವುದು ಸಾಹಿತಿಗೆ ಮಾತ್ರ. ಸಮಾಜದ ನಾಡಿಮಿಡಿತವನ್ನು ಅರಿತುಕೊಂಡು ಮನುಷ್ಯನ ಪರಕಾಯ ಪ್ರವೇಶ ಮಾಡಿ ಎಲ್ಲ ಸಂಸ್ಕೃತಿ, ಸಂಸ್ಕಾರವನ್ನು ಬಗೆದು ಕೊಡುವ ಶಕ್ತಿ ಇರುವುದು ಸಾಹಿತಿಗೆ ಮಾತ್ರ. ಸಾಹಿತ್ಯಕ್ಕೆ ಮಾತ್ರ. ಅಂದ ಮೇಲೆ ಇತಿಹಾಸವನ್ನು ಓದಿದ ಮಾತ್ರಕ್ಕೆ ಇತಿಹಾಸ ಅರ್ಥವಾಗಲ್ಲ, ಸಾಹಿತ್ಯವನ್ನೂ ಓದಿಕೊಳ್ಳಬೇಕು. ಬೇರೆಬೇರೆ ಮೂಲಗಳಿಂದ ಇತಿಹಾಸ ದಕ್ಕಿದರೆ ಆಗ ನಿಮ್ಮ ಜ್ಞಾನ ಸಮಗ್ರವಾಗಿ ರೂಪಿಸುತ್ತೆ ಎಂದು ವಿಶ್ಲೇಷಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ ಅಧ್ಯಕ್ಷತೆವಹಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ.ಗೋವಿಂದೇಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್.ನಳಿನಿ, ಐಕ್ಯೂಎಸಿ ಸಹಸಂಚಾಲಕಿ ಪ್ರೊ.ಧನಲಕ್ಷ್ಮಿ ಹಾಜರಿದ್ದರು. ಪ್ರೊ.ಬಿ.ಸುಜಾತ ನಿರೂಪಿಸಿದರು. ಅಧ್ಯಾಪಕ ರೇವಣ್ಣಸ್ವಾಮಿ ವಂದಿಸಿದರು. ಕು.ರೂಪಾ ಮತ್ತು ತಂಡದವರು ಪ್ರಾರ್ಥನೆ ಗೀತೆ ಹಾಡಿದರು.

RELATED ARTICLES
- Advertisment -
Google search engine

Most Popular