ಮಂಡ್ಯ: ಕೆರಗೋಡು ಗ್ರಾಮದಲ್ಲಿ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರಿಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಜೈಕಾರ ಹಾಕಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ವಿವಿಧ ದೇವಾಲಯಗಳಿಗೆ ಶಾಸಕರಿಂದ ಅನುದಾನ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀರಾಮ ದೇವಸ್ಥಾನಕ್ಕೆ ಅನುದಾನ ಕೊಟ್ಟು ರಾಮ ಭಕ್ತಿ ಮೆರೆದರು.
ಕೆರಗೋಡು ಗ್ರಾಮದ ದೇವಿರಮ್ಮ ದೇವಾಲಯಕ್ಕೆ 4 ಲಕ್ಷ, ಶ್ರೀಆಂಜನೇಯ ಸ್ವಾಮಿ ದೇವಸ್ಥಾನಕ್ಕೆ 1.5 ಲಕ್ಷ ರೂ., ಹೊನ್ನಮ್ಮ ದೇವಿ ದೇವಾಲಯಕ್ಕೆ 1.5 ಲಕ್ಷ ರೂ., ಚನ್ನಕೇಶವ ದೇವಸ್ಥಾನಕ್ಕೆ 1.5 ಲಕ್ಷ ರೂ., ದೊಡ್ಡಮ್ಮತಾಯಿ ದೇವಸ್ಥಾನಕ್ಕೆ 1.5 ಲಕ್ಷ ರೂ., ಮರಿಲಿಂಗನ ದೊಡ್ಡಿ ಶ್ರೀರಾಮ ದೇವಸ್ಥಾನಕ್ಕೆ 2,ಲಕ್ಷ, ದೇವಾಲಯದ ಅಭಿವೃದ್ಧಿಗೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹೊಸ ಮೈಷುಗರ್ ಕಾರ್ಖಾನೆ ಕಟ್ಟಲು ಯಾವುದೇ ವಿಘ್ನ ಬಾರದಂತೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ. 500 ಕೋಟಿಯಲ್ಲಿ ಹೊಸ ಕಾರ್ಖಾನೆ ನಿರ್ಮಾಣವಾಗ್ತಿದೆ. ಕೆರಗೋಡು ಪಂಚಲಿಂಗೇಶ್ವರ ದೇವಾಲಯದ ಕೆರೆಯ ಅಭಿವೃದ್ಧಿಗೆ 3 ಕೋಟಿ 70 ಲಕ್ಷ ರೂ., ನಾಲೆ ಅಭಿವೃದ್ಧಿಗೆ 5 ಕೋಟಿ ರಸ್ತೆ ಕೆರೆ ನಾಲೆ ಅಭಿವೃದ್ಧಿಗೆ ಒಟ್ಟು 10 ಕೋಟಿ ಮೀಸಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ನವೀನ್, ತಾ.ಪಂ ಮಾಜಿ ಸದಸ್ಯ ಪ್ರಶಾಂತ್ ಬಾಬು, ಮುಖಂಡ ಆನಂದ್, ರಮೇಶ್, ಉಮೇಶ್, ಸೇರಿ ಹಲವರು ಭಾಗಿಯಾಗಿದ್ದರು.