ಮಂಡ್ಯ: ರೈತಸಂಘ ಮತ್ತು ಬಿಜೆಪಿಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಬಳಿ ಬೇಬಿಬೆಟ್ಟದ ಗಣಿಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಆಗಮಿಸಿದ್ದ ಜಾರ್ಖಂಡ್‌ನ ತಂತ್ರಜ್ಞರ ತಂಡವು ಪರೀಕ್ಷಾರ್ಥ ಸ್ಫೋಟ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.
ಪರೀಕ್ಷಾರ್ಥ ಸ್ಫೋಟ ವಿರೋಧಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಜಲಾಶಯದ ಬಳಿ ಗೋಬ್ಯಾಕ್ ಚಳವಳಿ ನಡೆಸಿದರು. ಮತ್ತೊಂದೆಡೆ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡ ಅಶೋಕ್ ಜಯರಾಂ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರೂ ಪರೀಕ್ಷಾರ್ಥ ಸ್ಫೋಟದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತಸಂಘ ಮುಖಂಡರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡ ಅಶೋಕ್ ಜಯರಾಂ ಇತರ ಮುಖಂಡರ ಜತೆ ಮಾತುಕತೆ ನಡೆಸಿದ ತಂತ್ರಜ್ಞರ ತಂಡವು, ಪರೀಕ್ಷಾರ್ಥ ಸ್ಫೋಟ ಕಾರ್ಯಾಚರಣೆಯಿಂದ ಹಿಂದೆ ಸರಿಯಿತು. ಪರೀಕ್ಷಾರ್ಥ ಸ್ಫೋಟ ಕಾರ್ಯಾಚರಣೆ ಹಿಂದೆ ಸರಿದ ಹಿನ್ನೆಲೆಯಲ್ಲಿ ರೈತಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಟ್ರಯಲ್ ಬ್ಲಾಸ್ಟ್‌ಗೆ ಆದೇಶ ವಿಪರ್ಯಾಸ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಾರ್ಖಂಡ್ ಮೂಲಕ ತಂತ್ರಜ್ಞರು ಬಂದಿದ್ದರು. ಒಂದೆಡೆ ಜಲಾಶಯಕ್ಕೆ ಅಪಾಯವಿದೆ ಎಂದು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಕೋರ್ಟ್ ಹೇಳುತ್ತದೆ. ಮತ್ತೊಂದೆಡೆ ಯಾರೋ ಅರ್ಜಿ ಸಲ್ಲಿಸಿದ್ದಾರೆಂದು ಪರೀಕ್ಷಾರ್ಥ ಸ್ಫೋಟಕ್ಕೆ ಆದೇಶ ನೀಡಿರುವುದು ವಿಪರ್ಯಾಸ.