Sunday, April 20, 2025
Google search engine

Homeಸ್ಥಳೀಯಕೇಂದ್ರದ ವಿರುದ್ದ ಕಾಂಗ್ರೆಸ್ಸಿಗರ ಪ್ರತಿಭಟನೆ

ಕೇಂದ್ರದ ವಿರುದ್ದ ಕಾಂಗ್ರೆಸ್ಸಿಗರ ಪ್ರತಿಭಟನೆ

ಚಾಮರಾಜನಗರ:ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆಯು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ನೇತೃತ್ವದಲ್ಲಿ ಮುಖಂಡರು ಜನಪ್ರತಿದಿಗಳು ಸೇರಿ ಪಚ್ಚಪ್ಪ ವೃತ್ತದಲ್ಲಿ ಜಮಾವಣೆಗೊಂಡು ರಸ್ತೆಡೆ ನಡೆಸಿದರು.

ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಚುನಾವಣೆಗೂ ಮೊದಲು ತನ್ನ ಪ್ರಣಾಳಿಕೆಯಲ್ಲಿ ಅತ್ಯಂತ ಬಹುಮುಖ್ಯ ಘೋಷಣೆಗೊಳಿಸಿರುವುದು ಅತ್ಯಂತ ಮಹತ್ವದ ಘಟ್ಟವಾಗಿರುತ್ತದೆ. ಅನ್ನಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿರುವ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಕಾಯಿದೆ ಅನ್ವಯ ಉಚಿತ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ಹಾಲಿ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಎಫ್.ಸಿ.ಐ ಹಾಗೂ ಇತರೆ ಆಹಾರ ದಾಸ್ತಾನು ಮಂಡಳಿಗಳಿಗೆ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಒದಗಿಸಲು ಲಿಖಿತ ಮನವಿ ಮಾಡಿದ್ದರೂ ಸಹ ನಮ್ಮಲ್ಲಿ ದಾಸ್ತಾನು ಇಲ್ಲ ಅಥವಾ ಪ್ರಸ್ತುತ ಸರಬರಾಜು ಮಾಡಲು ಸಾಧ್ಯವಿಲ್ಲವೆಂಬ ಬೇಜವಾಬ್ದಾರಿ ಉತ್ತರವನ್ನು ನೀಡಿದೆ. ಅನ್ನ-ಆಹಾರ ಮಾನವನ ಬದುಕಿಗೆ ಅತ್ಯಂತ ಅವಶ್ಯಕ. ಪ್ರತಿಯೊಬ್ಬ ಮನುಷ್ಯನು ಹಸಿವಿನಿಂದ ಬಳಲಬಾರದೆಂಬುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಬೇಡಿಕೆಯ ಅನ್ವಯ ಪಡಿತರ ಅರ್ಜಿಯನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಮಾತನಾಡಿ, ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಜಾರಿ ಮಾಡುವುದಕ್ಕಾಗಿ ಅಕ್ಕಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ್ದ ಭಾರತೀಯ ಆಹಾರ ನಿಗಮ ಅಕ್ಕಿ ಪೂರೈಸುವ ಭರವಸೆ ನೀಡಿತ್ತು. ಕ್ವಿಂಟಲ್‌ಗೆ ₹3,400ರಂತೆ ನೀಡಲು ಒಪ್ಪಿಕೊಂಡಿತ್ತು. ಆದರೆ, ಮಾರನೇ ದಿನ ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದೆ’ ಎಂದು ಆರೋಪಿಸಿದರು.

‘ಇದು ಬಡವರಿಗಾಗಿ ಮಾಡುತ್ತಿರುವ ಕಾರ್ಯಕ್ರಮ, ಅದಾನಿ, ಅಂಬಾನಿಯವರಿಗೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಬಡವರು, ಜನ ಸಾಮಾನ್ಯರ ಬಗ್ಗೆ ಕಾಳಜಿ ಇದ್ದಿದ್ದರೆ ಈ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕಿತ್ತು. ಆದರೆ, ಯೋಜನೆ ಅನುಷ್ಠಾನ ಮಾಡಿದರೆ ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅಕ್ಕಿ ಪೂರೈಸಲು ಅಡ್ಡಗಾಲು ಹಾಕಿದೆ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕರಾದ ಆ‌ರ್.ನರೇಂದ್ರ, ಎಸ್‌.ಜಯಣ್ಣ, ಜಿ.ಎನ್‌.ನಂಜುಂಡಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular