ರಾಮನಗರ: ಕಿವಿ ಸೋರುವಿಕೆ, ಮರುಕಳಿಸುವ ನೋವು ಅಥವಾ ರಕ್ತಸ್ರಾವ, ಗಂಭೀರ ರೋಗವಾಗಿರುವುದು, ಆರಂಭದಲ್ಲಿಯೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶ್ರವಣದೋಷ ಪರೀಕ್ಷೇ ಹಾಗೂ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು ಜೊತೆಗೆ ಮನಸ್ಥಿತಿಗಳನ್ನು ಬದಲಾಯಿಸುವುದು ಎಲ್ಲರಿಗೂ ಶ್ರವಣ ಮತ್ತು ಶ್ರವಣ ಆರೈಕೆ ಸೇವೆಗಳನ್ನು ಸಾಪಲ್ಯಗೊಳಿಸೋಣ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪದ್ಮಾ ಅವರು ತಿಳಿಸಿದರು.
ಅವರು ನಗರದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ವಿಶ್ವ ಶ್ರವಣ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಹಾಗೂ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯ ಇ.ಎನ್.ಟಿ ತಜ್ಞ ಡಾ. ನಾಗೇಂದ್ರ ಮಾತನಾಡಿ, ಮಾನವನ ಪಂಚೇಂದ್ರಿಯದಲ್ಲಿ ಕಿವಿ ಪ್ರಮುಖ ಅಂಗವಾಗಿದ್ದು ಕಾರ್ಯಚಟುವಟಿಕೆಗಳಲ್ಲಿ ಬಹಳಷ್ಟು ಪ್ರಮುಖವಾಗಿದೆ. ಸುತ್ತ ಮುತ್ತಲಿನ ವಿಷಯಗಳ ಆಲಿಕೆ ಇಲ್ಲದಿದ್ದರೆ ಜೀವನಕ್ಕೆ ಕಷ್ಟ ಎಂದರು. ಕಿವಿಯೊಳಗೆ ಯಾವುದೇ ವಸ್ತುಗಳನ್ನು ಹಾಕಬಾರದು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ನೀವು ತೆಗೆದುಕೊಳ್ಳುವ ಔಷಧಿಗಳು ಕಿವಿಯ ಮೇಲೆ ಪರಿಣಾಮ ಬೀರುವುದೇ ಎಂದು ತಿಳಿದುಕೊಳ್ಳಿ, ನಿಮ್ಮ ಕಿವಿಯ ಪರಿಕ್ಷೇಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ, ವೈದ್ಯರು ಸೂಚಿಸಿದ ಶ್ರವಣ ಯಂತ್ರಗಳನ್ನು ಬಳಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಎಂ.ಒ ಡಾ. ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮನೋತಜ್ಞ ಡಾ. ಆದರ್ಶ್, ಶುಶ್ರೂಷಕ ಅಧೀಕ್ಷಕರು ಹರಿಣಾಕ್ಷಿ, ಆಡಿಯೋಲಾಜಿಸ್ಟ್ ನವ್ಯ, ಶ್ರವಣಬೋಧಕ ಸುರೇಶ್, ಆರೋಗ್ಯ ಸಿಬ್ಬಂದಿ, ಶಿಬಿರಾರ್ಥಿಗಳು, ಫಲಾನುಭವಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.