ಬೆಂಗಳೂರು: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನನ್ನ ಜಾತ್ಯತೀತ ನಿಲುವು ಪ್ರಶ್ನಿಸುವ ಕಾಂಗ್ರೆಸ್, ತಾಕತ್ತಿದ್ದರೆ ಮುಸ್ಲಿಂ ಸಮುದಾಯಕ್ಕೆ ನಾನು ಕೊಟ್ಟ ಶೇ ೪ ರಷ್ಟು ಮೀಸಲಾತಿ ಮರಳಿ ಕೊಡಲಿ ಎಂದು ಜೆಡಿಎಸ್ ರಾಷ್ಟ್ರೀಯ ನಾಯಕ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
ಸಿದ್ದರಾಮಯ್ಯ ಟೀಕಿಸಿದಂತೆ ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲ. ಯಾರದು ಶೂನ್ಯ ಸಾಧನೆ ಎನ್ನುವುದಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದ ನಾಯಕರೊಬ್ಬರಿಗೆ ಸಾರಿಗೆ ಮಂತ್ರಿ ಮಾಡಿದ್ದರು. ಕುಮಾರಸ್ವಾಮಿ ಸರ್ಕಾರ ಕೆಡವಿದವರ ಜತೆ ಸೇರಿಕೊಂಡು ಆ ಮಹಾನುಭಾವ ಈಗ ನಮ್ಮನ್ನೇ ಟೀಕೆ ಮಾಡುತ್ತಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾಮಗಾರಿಯ ಹಣ ಭರವಸೆ ಪತ್ರ ನೀಡಲು ಐದು ಪೈಸೆ ಪಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಐದು ಪೈಸೆ ತಗೊಳ್ಳೋದು ಎಲ್ಲಾದರೂ ಉಂಟೆ? ಅದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುತ್ತಾ? ನೀರಾವರಿ ಕಾರ್ಯದರ್ಶಿ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ. ನಾನೊಬ್ಬ ಸಣ್ಣ ರಾಜಕಾರಣಿ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಅಂತಹ ದೊಡ್ಡ ಹುದ್ದೆಗೆ ಕಿರಿಯ ಅಧಿಕಾರಿ ನೇಮಿಸಿದ್ದಾರೆ’ ಎಂದರು. ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ೬೯೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ಟೀಕಿಸಿದರು.