ಬೆಂಗಳೂರು: ದಲಿತ ಸಮುದಾಯದವರು ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ. ದಲಿತರು ಸಿಎಂ ಆದರೆ ಎಲ್ಲರೂ ಸಂತೋಷಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಿದ್ದರು. ಆದರೆ ಆಗ ನಮಗೆ ಹೆಚ್ಚು ಸ್ಥಾನಗಳು ಸಿಗಲಿಲ್ಲ. ಹಾಗೊಂದು ವೇಳೆ ಸ್ಥಾನಗಳು ಬಂದಿರುತ್ತಿದ್ದರೆ ಹಿಂದೆಯೇ ದಲಿತ ಸಿಎಂ ಆಗುತ್ತಿದ್ದರು. ಕಾಂಗ್ರೆಸ್ ನಿಂದ ಮಾತ್ರ ದಲಿತ ಸಿಎಂ ಆಗಲು ಅವಕಾಶ ಇದೆ ಎಂದರು.
ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳು ಬರಬೇಕು ಎಂಬ ಗುರಿ ಇದೆ. ಜನರ ಜೊತೆ ಯಾರು ಒಳ್ಳೆಯ ಹೆಸರು ತೆಗೆದುಕೊಂಡಿದ್ದಾರೋ ಅವರೇ ಸ್ಪರ್ಧಿಸಬೇಕಾಗುತ್ತದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸಿದ್ದ ಆಗಿರಬೇಕಾಗುತ್ತದೆ ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಡಾ. ಮಂಜುನಾಥ್ ಇಲ್ಲವೇ ಯಾರನ್ನೇ ಕಣಕ್ಕಿಳಿಸಿದರೂ ನಮಗೆ (ಕಾಂಗ್ರೆಸ್) ಭಯ ಇಲ್ಲ. ರಾಜಕೀಯ ಎಂದು ಬಂದಾಗ ಹೋರಾಟ ಇದ್ದಿದ್ದೆ ಎಂದು ತಿಳಿಸಿದರು.