ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ರವಿವಾರ ನಡೆಯಲಿರುವ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮೂಡಬಿದಿರೆ ಪರಿಸರದಲ್ಲಿ ಹಾಕಿದ ಫ್ಲೆಕ್ಸನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಮೂಡಬಿದಿರೆ ವಿದ್ಯಾಗಿರಿ ಬಳಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಮಿಥುನ್ ರೈಯವರ ಭಾವಚಿತ್ರವಿದ್ದ ಭಾಗವನ್ನೇ ಹರಿದುಹಾಕಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಠಾಣೆಗೆ ದೂರು ನೀಡಿರುವ ಕಾಂಗ್ರೆಸ್ ಮುಖಂಡರು ಫ್ಲೆಕ್ಸ್ ಹರಿದಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ನಿಯೋಗದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಸನಿಲ್, ಪುರಂದರ ದೇವಾಡಿಗ, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಸತೀಶ್ ಅಮೀನ್, ಇರ್ಷಾದ್, ರಾಜೇಶ್ ಕಡಲಕೆರೆ, ಅಲ್ತಾಫ್, ಅರುಣ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.