ಮಂಡ್ಯ: ಜಿಲ್ಲೆಯಲ್ಲಿ ಮಳೆ ಬರುತ್ತಿರುವುದರಿಂದ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಮರದ ಪೊಟರೆಯಲ್ಲಿ, ಹೂವಿನ ಕುಂಡಗಳಲ್ಲಿ, ಒಡೆದ ಬಾಟಲಿ, ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ಉಪಯೋಗಿಸದ ತೊಟ್ಟಿಗಳು, ಡ್ರಮ್‌ಗಳು, ಬ್ಯಾರೆಲ್ ಮುಂತಾದವುಗಳಲ್ಲಿ ಮಳೆ ನೀರು ೩ ದಿನಗಳಿಗಿಂತ ಹೆಚ್ಚು ದಿನ ಸಂಗ್ರಹವಾಗಿ ರೋಗವಾಹಕ ಸೊಳ್ಳೆಗಳು ಉತ್ಪತಿಯಾಗುತ್ತದೆ. ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟಲು ಸರಿಯಾದ ನೀರು ನಿಲ್ಲದಂತೆ ಸರಿಯಾದ ರೀತಿಯಲ್ಲಿ ಸಾರ್ವಜನಿಕರು ವಿಲೇವಾರಿ ಮಾಡಿ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ,ಮಂಡ್ಯ ಜಿಲ್ಲೆ, ಮಂಡ್ಯ. ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಡೆಂಗ್ಯೂ ದಿನಾಚಣೆ ಮತ್ತು ವಿಶ್ವ ಮಲೇರಿಯಾ ದಿನಾಚಣೆ ಪ್ರಯುಕ್ತ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗನವಾಡಿ, ಶಾಲೆಗಳು, ವಸತಿ ನಿಲಯಗಳಲ್ಲಿ ನೀರು ಸಂಗ್ರಹಣೆ ಆಗದಂತೆ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಗಮನ ಹರಿಸಬೇಕು. ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ ಎಂದರು.
ಮಳೆ ನೀರಿನ ಸಂಗ್ರಹಣೆಯಿಂದ ಡೆಂಗ್ಯೂ ಮಲೇರಿಯಾ ಈಗೆ ಅನೇಕ ಕಾಯಿಲೆಗಳು ಬರುವುದನ್ನು ತಡೆಗಟ್ಟಲು ಆರೋಗ್ಯ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರು ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು
ಸಾರ್ವಜನಿಕರು ಮುಂಜಾಗ್ರತ ಕ್ರಮವಾಗಿ ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್‌ಗಳು,ಬ್ಯಾರೆಲ್‌ಗಳು , ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳುವುದು.
ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಡ್ರಮ್ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚಳದಿಂದ ಮುಚ್ಚುವುದು ಎಂದರು
ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಮರದ ಪೊಟರೆಯಲ್ಲಿ, ಹೂವಿನ ಕಪಾಟುಗಳಲ್ಲಿ, ಒಡೆದ ಬಾಟಲಿ, ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ಬಾಟೆಲ್ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು
ಅಥವಾ ಸೂಕ್ತ ವಿಲೇವಾರಿ ಮಾಡುವುದು ಎಂದರು.
ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು, ಮೈ ತುಂಬ ಬಟ್ಟೆ ಧರಿಸುವುದು, ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯುವುದು,
ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡುವುದು ಎಂದರು.
ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗೀಯನ್ನು ಸೋಲಿಸೋಣ ಹಾಗೂ ಶೂನ್ಯ ಮಲೇರಿಯಾ ಗುರಿಯನ್ನು ತಲುಪೊ?ಣ, ನವೀನ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸೋಣ ಎಂಬುದು ಇದರ ಘೋಷಣೆ ವಾಕ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿ.ಹೆಚ್.ಒ ಡಾ. ಟಿ.ಎನ್ ಧನಂಜಯ, ಮಾನಸಿಕ ರೋಗ ತಜ್ಞರಾದ ಡಾ. ಕೆ. ಪಿ ಅಶ್ವಥ್, ಸರ್ವೇಕ್ಷಣಾಧಿಕಾರಿ ಡಾ. ಸಂಜಯ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ.ಎನ್.ಆಶಾಲತಾ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ. ನಾಗರಾಜು, ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಆರ್ ಶಶಿಧರ್ ಟಿ.ಹೆಚ್.ಒ .ಡಾ.ಜವರೇಗೌಡ, ಟಿ.ಹೆಚ್.ಒ ಡಾ. ರವೀಂದ್ರ, ಆಯುಷ್ ವೈದ್ಯಾಧಿಕಾರಿ ಡಾ. ಸೀತಾಲಕ್ಷ್ಮಿ ಹಾಗೂ ಇನ್ನಿತರರಿದ್ದರು.