ಮಂಡ್ಯ: ನರೇಗಾ ಯೋಜನೆಯ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿ ಮುಂದೆ ಕೃಷಿ ಕೂಲಿಕಾರರ ಸಂಘಟನೆ ವತಿಯಿಂದ ಕೂಲಿಕಾರರು ಪ್ರತಿಭಟನೆ ನಡೆಸಿದ್ದಾರೆ.
ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲೆ ಅಡುಗೆ ಮಾಡಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಗಾ ಕೆಲಸ ಮಾಡಿ ಎರಡು ವರ್ಷ ನಮಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. 2023ರಲ್ಲಿ 12 ಬೋರ್ಡ್ ಗಳ ಹಣವು ಕೂಡ ಬಂದಿಲ್ಲ. ಕಾಯಕ ಬಂಧುಗಳಿಗೆ N.M.R ತೆಗೆಯಿರಿ ಎಂದರೆ ತೆಗೆಯುವುದಿಲ್ಲ. ಹುಸ್ಕೂರು ಗ್ರಾಮ ಪಂಚಾಯಿತಿ ಪಿಡಿಒ ಬಿಲ್ ತೆಗೆಯುವುದರಲ್ಲಿ ಮೋಸ ಮಾಡುತ್ತಿದ್ದಾರೆ. ಪಿಡಿಒ ಹಾಗೂ ಇಓ ಸ್ಥಳಕ್ಕೆ ಬರುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಕೃಷಿ ಕೂಲಿಕಾರರ ತಾಲೂಕು ಕಾರ್ಯದರ್ಶಿ ಸರೋಜಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹುಸ್ಕೂರು ಗ್ರಾ.ಪಂ ಪಿಡಿಒ ಕೃಷಿ ಕೂಲಿಗಾರರಿಗೆ ವಂಚನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹುಸ್ಕೂರು ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದು ಇವರು ಮಳವಳ್ಳಿಯಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆ ಅವರು ಕೆಲಸ ಮಾಡುವ ಗ್ರಾಮದಲ್ಲೇ ವಾಸವು ಮಾಡಬೇಕು. ನೀವು ಕೃಷಿ ಕೂಲಿಕಾರರಿಗೆ ಮೋಸ ಮಾಡಿರುವುದು ಸರಿಯಲ್ಲ ಎಂದು ಕೂಲಿಕಾರರ ಸಂಘಟನೆ ರಾಜ್ಯ ಅಧ್ಯಕ್ಷ ಪುಟ್ಟಮಾದು ಕಿಡಿಕಾರಿದರು.