Saturday, April 19, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ:ಜಾತ್ರಾ ಮಹೋತ್ಸವ;ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ

ಪಿರಿಯಾಪಟ್ಟಣ:ಜಾತ್ರಾ ಮಹೋತ್ಸವ;ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ

ವರದಿ: ಬೆಕ್ಕರೆ ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಪಟ್ಟಣದ ಇತಿಹಾಸ ಪ್ರಸಿದ್ದ ಶಕ್ತಿ ದೇವತೆಗಳಾದ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮರಥೋತ್ಸವ ಮಾ.12ರ ಮಂಗಳವಾರ ಮತ್ತು ಶ್ರೀ ಮಸಣಿಕಮ್ಮನವರ ಬ್ರಹ್ಮರಥೋತ್ಸವ ಮಾ.14ರ ಗುರುವಾರ ನಡೆಯಲಿದ್ದು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಕಲ ಸಿದ್ಧತೆ ಭರದಿಂದ ಸಾಗಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಕನ್ನಂಬಾಡಿ ಅಮ್ಮನವರು ಮತ್ತು ಶ್ರೀ ಮಸಣಿಕಮ್ಮನವರ ದೇವಾಲಯವನ್ನು ಸುಣ್ಣ ಬಣ್ಣ ಬಳಿದು ವಿಶೇಷ ತಳಿರು ತೋರಣ ಹಾಗೂ ಹೂ ಮತ್ತು ವಿದ್ಯುತ್ ದೀಪ ಅಲಂಕಾರ ಮಾಡಲಾಗಿದೆ.

ಪಟ್ಟಣದ ಬಿ..ಎಂ ಮುಖ್ಯ ರಸ್ತೆಯಲ್ಲಿನ ಅಂಗಡಿಗಳ ಬಳಿ ವರ್ತಕರು ದೀಪಾಲಂಕಾರ ಮಾಡಿದ್ದಾರೆ, ಎರಡು ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಐಸ್ ಕ್ರೀಮ್ ಸೇರಿದಂತೆ ಅನ್ನ ಸಂತರ್ಪಣೆ ಮಾಡಲು ದೇವಾಲಯ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳು ತಯಾರಿ ನಡೆಸಿವೆ.

ತಾಲೂಕು ಆಡಳಿತ ವತಿಯಿಂದ ಸಚಿವರಾದ ಕೆ.ವೆಂಕಟೇಶ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಅರ್ಚಕರು ಮತ್ತು ಗ್ರಾಮಗಳ ಯಜಮಾನರು ಮುಖಂಡರ ಸಭೆ ಕರೆದು ಜಾತ್ರೆ ಯಶಸ್ವಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಮಾ.11ರ ಸೋಮವಾರ ಅಂಕುರಾರ್ಪಣೆ ನಡೆಯಿತು, ಮಾ.12ರ ಮಂಗಳವಾರ ಬೆಳಿಗ್ಗೆ 10.30 ರಿಂದ 12.10 ಗಂಟೆ ಒಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.

ಮಾ.13ರ ಬುಧವಾರ ಸಂಜೆ 5 ಗಂಟೆಗೆ ಉಪ್ಪಾರಗೇರಿ, ದೇವೇಗೌಡನಕೊಪ್ಪಲು, ಬ್ರಾಹ್ಮಣರ ಬೀದಿ ಸೇರಿದಂತೆ ಹಲವೆಡೆ ಶ್ರೀ ಅಮ್ಮನವರ ಉತ್ಸವ ನಡೆಯಲಿದೆ, ಮಾ.14ರ ಗುರುವಾರ ಸಂಜೆ 7 ಗಂಟೆಗೆ ದೇವಾಲಯದ ಬಳಿಯ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.

ಶ್ರೀ ಮಸಣಿಕಮ್ಮನವರ ದೇವಾಲಯದಲ್ಲಿ ಮಾ.13ರ ಬುಧವಾರ ಅಂಕುರಾರ್ಪಣೆ ನಡೆಯಲಿದೆ. ಮಾ.14ರ ಗುರುವಾರ ಬೆಳಿಗ್ಗೆ 10.30 ರಿಂದ 12 ಗಂಟೆ ಒಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಮಾ.15ರ ಶುಕ್ರವಾರ ಕೈತಟ್ಟೆ ಉತ್ಸವ, ಮಾ.16ರ ಶನಿವಾರ ಸಂಜೆ ಪಟ್ಟಣದ ದೊಡ್ಡ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯದ ಅರ್ಚಕರಾದ ಹರೀಶ್ ಮತ್ತು ಸ್ವರ್ಣ ರಾಜ್ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ ಸಂದರ್ಭ ಮೈಸೂರು ಮಡಿಕೇರಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular