ಬೆಂಗಳೂರು: ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಅಂಬೇಡ್ಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತ ಕಂಠದಿಂದ ಹೊಗಳಿದ್ದಾರೆ. ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಪ್ರಧಾನಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಪಕ್ಷದ ಸಂಸದರೊಬ್ಬರು ಪದೇ ಪದೇ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಅನಂತಕುಮಾರ್ ಹೆಗಡೆ ಅವರ ಹೇಳಿಕೆಯಿಂದ ದೂರ ಇದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದರೆ ಸಾಲುವುದಿಲ್ಲ. ಅವರನ್ನು ಪಕ್ಷದಿಂದ ಹೊರಹಾಕಬೇಕು ಅಥವಾ ನಿಯಂತ್ರಿಸಬೇಕು. ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸರಿಯಾದ ಅಭ್ಯರ್ಥಿಯೇ ಇಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳಬಹುದು. ಆದರೆ, ಚುನಾವಣೆ ನಂತರ ವಾಸ್ತವಾಂಶ ಏನೆಂಬುದು ಗೊತ್ತಾಗಲಿದೆ. ಸಚಿವ ಎಚ್.ಸಿ. ಮಹದೇವಪ್ಪ ಅವರ ಸ್ಪರ್ಧೆಯ ಮಾತುಗಳು ಕೇಳಿಬರುತ್ತಿವೆ. ನನಗೆ ಟಿಕೆಟ್ ಬೇಡ, ಮಗನಿಗೆ ನೀಡುವಂತೆ ಮಹದೇವಪ್ಪ ಅವರು ಹೇಳುತ್ತಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್ ಮಾಡಲಿದೆ ಎಂದು ತಿಳಿಸಿದರು.
ತುಮಕೂರಿನಲ್ಲಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ಮಾಡುತ್ತಿರುವವರನ್ನು ಮನವೊಲಿಸುವ ಕೆಲಸವನ್ನು ಆರಂಭಿಸಲಾಗಿದೆ. ಯಾರಿಗೆ ಅಸಮಾಧಾನ ಇದೆಯೊ ಅವರಿಗೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಲಾಗಿದೆ. ಚುನಾವಣೆ ಎಂದ ಮೇಲೆ ಅಸಮಾಧಾನ ಸಹಜ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.