ಕಲಬುರಗಿ: ಭಾರತ ಇಂದು ಜಗತ್ತಿನ ಅತಿದೊಡ್ಡ ಸಂವಿಧಾನ ಬದ್ಧ ರಾಷ್ಟ್ರವಾಗಿದೆ. ವಿಭಿನ್ನ ಧರ್ಮ, ಜಾತಿಗಳ ಜನರಿಗೆ ಅವಕಾಶ ಹಾಗೂ ಸೌಲಭ್ಯಗಳು ಸಮಾನವಾಗಿ ಸಿಗಲು ಸಂವಿಧಾನ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ವಾಡಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ, ಅಂದಾಜು ೪೨೩.೦೯ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಐದು ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವಾಭಿಮಾನದ ಬದುಕು ಹಾಗೂ ಆರ್ಥಿಕ ಸಮಾನತೆ ಸಿಗುತ್ತಿದೆ. ಸಂವಿಧಾನದ ೭೫ ವರ್ಷದ ಆಚರಣೆ ಮಾಡುವುದರ ಜತೆಗೆ ಬಸವಣ್ಣನವರ ತತ್ವಗಳ ಆಧಾರದ ಮೇಲೆ ಯೋಜನೆಗಳು ಹಾಗೂ ನೀತಿಗಳನ್ನು ರೂಪಿಸಲಾಗುತ್ತಿದೆ. ಹಾಗಾಗಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಲಾಗಿದೆ. ಬಸವ ತತ್ವಕ್ಕು ಸಂವಿಧಾನದ ಆಶಯಕ್ಕೂ ನಂಟಿದೆ. ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಈ ಎರಡರಲ್ಲಿದೆ ಎಂದು ಹೇಳಿದರು.