ಯಳಂದೂರು: ತಾಲೂಕಿನ ಅಗರ ಗ್ರಾಮದ ಹಿಂಡಿಮಾರಮ್ಮ ದೇಗುಲದ ಆವರಣದಲ್ಲಿ ದಿ. ಎಂ.ಎನ್. ನಾಗರಾಜು ರವರ ೬ ನೇ ವರ್ಷದ ಪುಣ್ಯ ಸ್ಮರಣಾರ್ಥ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ, ಸಮರ್ಪಣ ಫೌಂಡೇಶನ್‌ನ ಸಹಯೋಗದಲ್ಲಿ ಸೋಮವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಈ ಶಿಬಿರವನ್ನು ಚಾಮುಲ್ ಅಧ್ಯಕ್ಷ ನಾಗೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಗರ ಗ್ರಾಮದ ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎನ್. ನಾಗರಾಜು ರವರ ಸ್ಮರಣಾರ್ಥ ಇವರ ಪುತ್ರ ಎಂ.ಎನ್. ರಾಜು ರವರು ಪ್ರತಿ ವರ್ಷವೂ ಇಂತಹ ಕೆಲಸಗಳನ್ನು ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಮಾಡಿಸಿ ಇವರಿಗೆ ಹೆಚ್ಚಿನ ಚಿಕಿತ್ಸೆಗೆ ಬೇಕಾಗುವ ನೆರವು, ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ವಿಶೇಷ ಶಕ್ತಿ ಬೇಕು. ಅಲ್ಲದೆ ಇಂತಹ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುವ ಬದಲು ಇಂತಹ ಜನಪರ ಕೆಲಸಗಳಿಗೆ ಉಪಯೋಗಿಸುವುದನ್ನು ಇತರರೂ ಅನುಸರಿಸಬೇಕು ಎಂದರು.
ಸಮರ್ಪಣ ಫೌಂಡೇಷನ್‌ನ ಅಧ್ಯಕ್ಷ ಎಂ.ಎನ್. ರಾಜು ಮಾತನಾಡಿ, ಈ ಶಿಬಿರದಲ್ಲಿ ೧೪೬ ಮಂದಿ ಕಣ್ಣಿನ ತಪಾಸಣೆಗೆ ಒಳಪಟ್ಟರು ಇದರಲ್ಲಿ ೨೯ ಮಂದಿಯನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಮುದ್ದನಾಯಕ, ಸದಸ್ಯರಾದ ದೇವರಾಜು, ಸ್ವಾಮಿ ಮುಖಂಡರಾದ ಬೂದಿತಿಟ್ಟು ಶಿವಕುಮಾರ್, ಸನತ್, ನಾಗರಾಜು, ಶಂಕರ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಶ್ರೀಕಂಠಮೂರ್ತಿ ಸೇರಿದಂತೆ ಇತರರು ಇದ್ದರು.