ಯಳಂದೂರು: ನಾನು ಶಾಸಕನಾಗಿ ಆಯ್ಕೆಯಾಗಿ ೧೦ ತಿಂಗಳಾಗಿದ್ದು ಈ ಅವಧಿಯಲ್ಲಿ ೧೦೦ ಕೋಟಿ ರೂ.ಗೂ ಅಧಿಕ ಅನುದಾನವನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತರಲಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಅವರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮಂಜೂರಾಗಿರುವ ನೂತನ ಪಶು ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ಮೀಸಲಾಗಿಟ್ಟರೂ ಕೂಡ ಸದೃಢವಾಗಿದೆ. ಇದಕ್ಕೆ ದಾಖಲೆಯ ೧೫ ಬಾರಿ ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯ ಸಮತೋಲನವನ್ನು ಕಾಪಾಡಿಕೊಂಡಿದ್ದು ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿಗೆ ಅನುದಾನಗಳನ್ನು ಮೀಸಲಾಗಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಯಳಂದೂರು ಪಟ್ಟಣದ ೧೦೦ ಹಾಸಿಗೆಗಳ ಆಸ್ಪತ್ರೆಗೆ ೪೦ ಕೋಟಿ ರೂ. ಬಿಳಿಗಿರಿರಂಗನಬೆಟ್ಟದ ರಸ್ತೆ ಅಭಿವೃದ್ಧಿಗೆ ೨೦ ಕೋಟಿ ರೂ. ೨೫ ಕೋಟಿ ರೂ. ವಿಶೇಷ ಅನುದಾನ ತಂದಿದ್ದು ಇದರಲ್ಲಿ ಎಲ್ಲಾ ಜಾತಿಯ, ಧರ್ಮಗಳ ಅಪೂರ್ಣಗೊಂಡ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ೧೨ ಕೋಟಿ ರೂ. ನೀಡಲಾಗಿದೆ. ಅಲ್ಲದೆ ಐಟಿಐ ಕಾಲೇಜು ಕಟ್ಟಡ, ವಿವೇಕ್ ಯೋಜನೆ, ಪಾಲಿಟೆಕ್ನಿಕ್ ಕಾಲೇಜು ಕಟ್ಟಡಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣವನ್ನು ಮೀಸಲಾಗಿಟ್ಟಿದ್ದು ೧೦೦ ಕೋಟಿ ರೂ. ಅಧಿಕ ಅನುದಾನವನ್ನು ನೀಡಲಾಗಿದ್ದು ಈ ಬಗ್ಗೆ ಅಧಿಕೃತವಾಗಿ ಶೀಘ್ರದಲ್ಲೇ ಎಲ್ಲಾ ಅಂಕಿಅಂಶಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.
೩೦ ವರ್ಷಗಳ ಬೇಡಿಕೆ ಈಡೇರಿಕೆ: ಕಳೆದ ೩೦ ವರ್ಷಗಳಿಂದಲೂ ತಾಲೂಕಿನ ಗೌಡಹಳ್ಳಿ ಗ್ರಾಮಕ್ಕೆ ಪಶು ಆಸ್ಪತೆ ಬೇಕೆಂಬ ಬೇಡಿಕೆ ಇತ್ತು. ಈಗ ಇದು ಈಡೇರಿದೆ. ಇದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾಗಿದೆ. ಈ ಆಸ್ಪತ್ರೆ ವ್ಯಾಪ್ತಿಯಲ್ಲಿ ೩೭೩೧ ಜಾನುವಾರುಗಳಿವೆ ಎಂಬ ಮಾಹಿತಿ ಇದ್ದು ಇದರಿಂದ ಅನೇಕ ಅನುಕೂಲಗಳು ಆಗಲಿವೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಪಶು ಇಲಾಖೆಯಲ್ಲಿ ಒಟ್ಟು ೩೩ ಹುದ್ದೆಗಳಿದ್ದು ಕೇವಲ ೧೦ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ೨೩ ಹುದ್ದೆ ಖಾಲಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಈ ಇಲಾಖೆಯ ಸಚಿವರಾಗಿದ್ದು ಇವರಿಗೆ ಮನವಿ ಮಾಡಿ ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ ಗುಂಡ್ಲುಪೇಟೆಯ ಸೋಮಹಳ್ಳಿ, ಹಾಗೂ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮಕ್ಕೆ ನೂತನ ಪಶುಆಸ್ಪತ್ರೆಯನ್ನು ನೀಡಿದ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಪಶು ಇಲಾಖೆಯ ಉಪನಿರ್ದೇಶಕ ಡಾ.ಎಲ್. ಹನುಮೇಗೌಡ, ಸಹಾಯಕ ನಿರ್ದೇಶಕರಾದ ಡಾ. ಶಿವಣ್ಣ, ಡಾ.ಎಸ್. ಶಿವರಾಜು ಗ್ರಾಪಂ ಸದಸ್ಯರಾದ ಪುಷ್ಪ, ರಾಧಾ, ಶಿವನಂಜಮ್ಮ, ಶಾಂತಮಲ್ಲು, ಉಮೇಶ್, ಸೋಮಶೇಖರ್, ಸುಂದರ್, ಪಿಡಿಒ ರಮೇಶ್, ಎಚ್.ವಿ. ಚಂದ್ರು, ತೋಟೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ರಾಮಚಂದ್ರು, ಚೇತನ್‌ದೊರೆರಾಜ್, ರಾಜು, ರವಿ, ನಾಗೇಶ್, ವಿಜಯ್, ಕಂದಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಅನೇಕರು ಇದ್ದರು.