ಲಕ್ನೋ : ಉತ್ತರ ಪ್ರದೇಶದಲ್ಲಿ ೨೦೧೦ರಲ್ಲಿ ನಡೆದ ಹಿಂಸಾಚಾರ ಪ್ರಕರಣದ ತೀರ್ಪನ್ನು ನೀಡುವ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಧಾರ್ಮಿಕ ಹಿನ್ನೆಲೆಯನ್ನು ಶ್ಲಾಘಿಸಿ ಮತ್ತು ದೇಶದಲ್ಲಿ ಮತೀಯ ಹಿಂಸಾಚಾರಕ್ಕೆ ಮುಸ್ಲಿಮರನ್ನು ದೂಷಿಸಿದ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟಿಸ್ (ಎಐಎಲ್‌ಎಜೆ) ಪತ್ರ ಬರೆದಿದೆ.
ಮಾರ್ಚ್ ೫ರ ಆದೇಶದಲ್ಲಿ ರವಿ ಕುಮಾರ್ ದಿವಾಕರ್ ಮಾಡಿರುವ ಅನಗತ್ಯ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆಸಬೇಕು ಎಂದು ಎಐಎಲ್‌ಎಜೆ ಕೋರಿದೆ. ಈ ತೀರ್ಪಿನಲ್ಲಿ ನ್ಯಾಯಾಧೀಶರ ಹೇಳಿಕೆಗಳು ಮತ್ತು ತೀರ್ಮಾನಗಳು ವಿವಾದಿತ, ಪಕ್ಷಪಾತದಿಂದ ಕೂಡಿವೆ ಮತ್ತು ಅಸಂವಿಧಾನಿಕವಾಗಿದೆ ಎಂದು ಹೇಳಿದೆ. ನ್ಯಾಯಾಧೀಶ ದಿವಾಕರ್ ಅವರು ಸಂವಿಧಾನ ಮತ್ತು ಅದರ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯುವ ಕರ್ತವ್ಯಕ್ಕೆ ವಿರುದ್ಧವಾಗಿ ಬಹು ಸಂಖ್ಯಾತರ ದೃಷ್ಟಿಕೋನಕ್ಕೆ ಸಹಾನುಭೂತಿ ಪ್ರದರ್ಶಿಸುತ್ತಿದ್ದಾರೆ ಮತ್ತು ಸಾಂವಿಧಾನಿಕ ನೈತಿಕತೆಯ ಕಡೆಗಣನೆ” ಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಎಐಎಲ್‌ಎಜೆ ಆರೋಪಿಸಿದೆ. ಇದಕ್ಕೆ ಶಿಕ್ಷೆ ವಿಧಿಸದಿರಲು ಸಾಧ್ಯವಿಲ್ಲ ಎಂದು ಹೇಳಿದೆ.
ಬರೇಲಿಯ ತ್ವರಿತಗತಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿರುವ ದಿವಾಕರ್ ಮಾರ್ಚ್ ೫ರಂದು ಈ ತೀರ್ಪು ನೀಡಿದ್ದರು. ಬರೇಲಿಯಲ್ಲಿ ೨೦೧೦ರಲ್ಲಿ ನಡೆದ ಮತೀಯ ಹಿಂಸಾಚಾರ ಪ್ರಕರಣದಲ್ಲಿ ಖ್ಯಾತ ಮುಸ್ಲಿಂ ಧರ್ಮಗುರು-ರಾಜಕಾರಣಿ ಮೌಲಾನ ತೌಖೀರ್ ರಝಾ ಖಾನ್ ಅವರ ಹೆಸರನ್ನು ಈ ಪ್ರಕರಣದ ಚಾರ್ಚ್‌ಶೀಟ್‌ನಲ್ಲಿ ಸೇರಿಸಿ ಅವರಿಗೆ ಮಾರ್ಚ್ ೧೧ರಂದು ಹಾಜರಾಗುವಂತೆ ಸೂಚಿಸಿದ್ದರು. ಅವರನ್ನು ದಂಗೆಗಳ ಪ್ರಮುಖ ಸಂಚುಕೋರ ಎಂದು ನ್ಯಾಯಾಧೀಶರು ಬಣ್ಣಿಸಿದ್ದರು. ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿ, ಧಾರ್ಮಿಕ ವ್ಯಕ್ತಿಯೊಬ್ಬರು ಅಧಿಕಾರದ ಗದ್ದುಗೆಯಲ್ಲಿರುವುದಕ್ಕೆ ಅವರು ದೊಡ್ಡ ಉದಾಹರಣೆ ಎಂದಿದ್ದರು.
ಈ ಹಿಂದೆ ವಾರಣಾಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಿವಾದಿತ ಆದೇಶ ನೀಡಿದ್ದ ದಿವಾಕರ್, ಮಾರ್ಚ್ ೫ರ ತೀರ್ಪಿನಲ್ಲಿ ಹೇಳಿಕೆ ನೀಡಿ ರಾಜಕೀಯ ಪಕ್ಷಗಳು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುವುದರಿಂದ ದಂಗೆಗಳು ನಡೆಯುತ್ತಿವೆ ಎಂದಿದ್ದರಲ್ಲದೆ ಜ್ಞಾನವಾಪಿ ಪ್ರಕರಣ ಉಲ್ಲೇಖಿಸಿ ಮುಸ್ಲಿಂ ಗುಂಪುಗಳಿಂದ ಬೆದರಿಕೆ ಎದುರಿಸಿ ತಾವು ಮತ್ತು ತಮ್ಮ ಕುಟುಂಬ ಭಯದಲ್ಲಿ ಜೀವಿಸುವಂತಾಗಿತ್ತು ಎಂದಿದ್ದರು.
ನ್ಯಾಯಾಧೀಶರು ನೀಡಿದ ಹೇಳಿಕೆಗಳು `ಮುಸ್ಲಿಮ್ ಸಮುದಾಯದ ಬಗ್ಗೆ ತಪ್ಪಾದ ಮತ್ತು ಮತಾಂಧ ಭಾವನೆಯನ್ನು ಮೂಡಿಸಿದೆ. ಮುಸ್ಲಿಂ ಸಮುದಾಯದ ವಿರುದ್ಧ ಸ್ಪಷ್ಟವಾದ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತ ಹೇಳಿಕೆ ನೀಡುವ ಮೂಲಕ ನ್ಯಾಯಾಧೀಶರು ನ್ಯಾಯಾಂಗ ನಡವಳಿಕೆಯ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಂದಿಸಿದ್ದಾರೆ ಎಂದು ಎಐಎಲ್‌ಎಜೆ ಖಂಡನೆ ವ್ಯಕ್ತಪಡಿಸಿದೆ.