ಮೈಸೂರು: ಮೂಡಾ ಅಧ್ಯಕ್ಷ ಕೆ.ಮರೀಗೌಡ ಅವರು ಮೂಡಾ ಕಛೇರಿಯ ಎಲ್ಲಾ ಶಾಖೆಗಳಿಗೆ ದಿಢೀರ್ ಭೇಟಿ ನೀಡಿ ನೌಕರರಿಗೆ ಎಚ್ಚರಿಕೆ ನೀಡಿದರು. ಕೆ.ಮರೀಗೌಡರು ಗುರುವಾರ ಕಛೇರಿಗೆ ಬಂದ ತಕ್ಷಣ ಪ್ರತಿ ಶಾಖೆಗೆ ಭೇಟಿ ನೀಡಿ ಮಾತನಾಡಿದ ಅವರು ಸಾರ್ವಜನಿಕರಿಂದ ಹಾಗೂ ಪತ್ರಿಕೆಗಳಲ್ಲಿ ಅಧಿಕಾರಿಗಳು, ನೌಕರರು ಸರಿಯಾದ ಸಮಯಕ್ಕೆ ಕಛೇರಿಗೆ ಬರುತ್ತಿಲ್ಲ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಆದ್ದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಛೇರಿಗೆ ಸರಿಯಾದ ಸಮಯಕ್ಕೆ ಬರಬೇಕು. ಮಧ್ಯವರ್ತಿಗಳನ್ನು ದೂರವಿಟ್ಟು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿ ಕೊಡಬೇಕು ಆಗದಿದ್ದರೆ, ಹಿಂಬರಹ ಕೊಡಬೇಕು. ಆಯಾ ಕಛೇರಿಗೆ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಎಂಟ್ರಿ ಮಾಡಿಕೊಳ್ಳಬೇಕು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಆಗಾಗ್ಗೆ ಅಲೆಸಬಾರದು ನಾನು ಈಗಾಗಲೇ ಅಧಿಕಾರಿಗಳ ಸಭೆ ಮಾಡಿ ತಿಳಿಸಿದ್ದೇನೆ. ನಿಮಗೂ ವಿಷಯ ತಿಳಿದಿರಲಿ ಎಂದು ಹೇಳುತ್ತಿದ್ದೇನೆ. ಮೂಡಾದಲ್ಲಿ ಎಲ್ಲೆಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ, ಪ್ರತಿ ಶಾಖೆಯವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ದೂರು ಬಂದರೆ ನಿಮ್ಮ ಮೇಲೆಯೇ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
