ಬೆಂಗಳೂರು: ಬಿ.ಟೆಕ್ ವಿದ್ಯಾರ್ಥಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಗೀತಂ ವಿಶ್ವವಿದ್ಯಾಲಯದ ಕುಲಪತಿ ಮತ್ತು ಸೆಕ್ಯೂರಿಟಿ ಇನ್ಚಾರ್ಜ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೃತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಕರ್ನೂಲ್ ಮೂಲದ ಬಿಟೆಕ್ ವಿದ್ಯಾರ್ಥಿ ದಾಸರಿ ಬ್ರಹ್ಮಸಾಯಿ ರೆಡ್ಡಿ ಮಂಗಳವಾರ ರಾತ್ರಿ ವಿಶ್ವವಿದ್ಯಾಲಯದ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು.
ಈ ಸಂಬಂಧ ಕುಲಪತಿ ಆಚಾರ್ಯ, ವಿವಿ ಅಧ್ಯಕ್ಷ ಭರತ್, ಕಾಂಟ್ರಾಕ್ಟರ್ ಮುನಿಕೃಷ್ಣ, ಆಪರೇಷನ್ ಕಾಂಟ್ರಾಕ್ಟರ್ ವಿಜಯ್ ಬಾಸ್ಕರ್, ಸೆಕ್ಯೂರಿಟಿ ಇನ್ಚಾರ್ಜ್ ವಿಜಯ್ ಗಜ್ಜಿ, ರಾಘವೇಂದ್ರ, ವಾರ್ಡನ್ ಇನ್ಚಾರ್ಜ್ ಟಿಂಟೂ, ಮತ್ತು ಕೊಪ್ಪಸ್ವಾಮಿ ವಿರುದ್ದ ಪ್ರಕರಣ ದಾಖಲಾಗಿದೆ.
ಮುಂಜಾಗ್ರತಾ ಕ್ರಮವಿಲ್ಲದೆ ಹಾಸ್ಟೇಲ್ ಕಟ್ಟಡ ಕಾಮಗಾರಿ, ವಿದ್ಯಾರ್ಥಿಗಳು ಹೋಗದಂತೆ ಸೆಕ್ಯೂರಿಟಿಗಳ ನೇಮಕ ಮಾಡದಿರುವುದು ಸೇರಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಗೀತಂ ವಿಶ್ವವಿದ್ಯಾಲಯವು ಬೆಂಗಳೂರಿನಿಂದ 44 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರ ಸಮೀಪದ ನಾಗದೇನಹಳ್ಳಿಯಲ್ಲಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಈ ರೀತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ವಿವರಿಸಿವೆ.