ಬೆಂಗಳೂರು: ಹಾವೇರಿ ಕ್ಷೇತ್ರ ಟಿಕೆಟ್ ನಿಮ್ಮ ಮಗನಿಗೇ ಕೊಡಿಸುವೆ, ನಾನೇ ಓಡಾಡಿ ಗೆಲ್ಲಿಸುವೇ ಎಂದಿದ್ದ ಬಿ.ಎಸ್. ಯಡಿಯೂರಪ್ಪ ಮೋಸ ಮಾಡಿದ್ದಾರೆ. ಈಗ ಪುತ್ರ ಕಾಂತೇಶ್‌ನನ್ನು ವಿಧಾನ ಪರಿಷತ್‌ಗೆ ಕಳುಹಿಸುತ್ತೇವೆ ಎಂದರೆ ಹೇಗೆ ನಂಬಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತವಾದ ಎರಡೇ ದಿನದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳುವ ಭರವಸೆ ನೀಡಿ, ಅಂದು ಮೋಸ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಅರ್ಧಕ್ಕೆ ತಡೆದರು. ಅಂದು ಅಮಿತ್ ಶಾ, ಯಡಿಯೂರಪ್ಪ ಅವರ ಮಾತು ಕೇಳದೇ ಇದ್ದಿದ್ದರೆ ಬ್ರಿಗೇಡ್ ಇಂದು ಹಿಂದುಳಿದವರ ಬೃಹತ್ ಸಂಘಟನೆಯಾಗುತ್ತಿತ್ತು. ಈಗ ವಿಧಾನ ಪರಿಷತ್ ಕಡೆ ತೋರಿಸಿ, ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಚಳವಳಿಯೇ ನಡೆದಿತ್ತು. ಕಾರ್ಯಕರ್ತರೇ ತಿರಸ್ಕರಿಸಿದ್ದವರನ್ನು ಬೆಂಗಳೂರು ಉತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ಅಲ್ಲಿ ಜನಪ್ರಿಯತೆಗಳಿಸಿದ್ದ ಸದಾನಂದ ಗೌಡರಿಗೆ ಮೋಸ ಮಾಡಿದ್ದಾರೆ. ಬರೀ ನಾಯಕರಿಗಷ್ಟೇ ಅಪ್ಪ, ಮಕ್ಕಳು (ವಿಜಯೇಂದ್ರ) ಮೋಸ ಮಾಡುತ್ತಿಲ್ಲ. ಇಡೀ ರಾಜ್ಯದ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ. ಅಂಥ ಕಾರ್ಯಕರ್ತರ ಧ್ವನಿಯಾಗಿ ಲೋಕಸಭಾ ಚುನಾವಣೆಗೆ ನಿಲ್ಲುತ್ತಿದ್ದೇನೆ. ಶಿವಮೊಗ್ಗದಲ್ಲಿ ಮಾರ್ಚ್ ೧೫ರಂದು ನಡೆಯುವ ಸಭೆಯ ನಂತರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವೆ’ ಎಂದರು.
ಯಡಿಯೂರಪ್ಪ ಮೋಸ ಮಾಡುತ್ತಾರೆ ಎಂದು ಗೊತ್ತಿದ್ದರೆ ಅಮಿತ್ ಶಾ, ನಡ್ಡಾ, ಮೋದಿ ಅವರನ್ನೇ ಕೇಳುತ್ತಿದ್ದೆ. ಕ್ಷೇತ್ರದಿಂದಲೇ ಪಲಾಯನ ಮಾಡಿದ ಶೋಭಾ ಯಾರನ್ನು ಕೇಳಿ ಟಿಕೆಟ್ ಪಡೆದರು? ಅವರಿಗೆ ಟಿಕೆಟ್ ಕೊಡಿಸಲು ಹಠ ಹಿಡಿದಂತೆ ನನ್ನ ಮಗನಿಗೆ, ಸದಾನಂದ ಗೌಡ, ಸಿ.ಟಿ. ರವಿ, ಪ್ರತಾಪ್ ಸಿಂಹ ಮತ್ತಿತರರ ವಿಷಯದಲ್ಲಿ ಏಕೆ ಹಿಡಿಯಲಿಲ್ಲ’ ಎಂದು ಪ್ರಶ್ನಿಸಿದರು. `ಹಾವೇರಿ ಟಿಕೆಟ್ ತಪ್ಪಲು ಶಾಸಕ ಬಸವರಾಜ ಬೊಮ್ಮಾಯಿ ಕಾರಣರಲ್ಲ. ಅವರೇ ಕಾಂತೇಶ್ ಹೆಸರು ಸೂಚಿಸಿದ್ದರು. ಈಗಲೂ ಅವರು ಒತ್ತಾಯದಿಂದ ಕಣಕ್ಕೆ ಇಳಿದಿದ್ದಾರೆ ಎಂದರು.