ಬೆಂಗಳೂರು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ೧೦ ವರ್ಷಗಳಿಂದ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ, ಟಿಕೆಟ್ ಘೋಷಣೆಯಾದ ಮೇಲೂ ಮುಂದುವರಿದಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸ್ವಪಕ್ಷೀಯರಿಂದಲೇ ಎದುರಾದ ಗೋ ಬ್ಯಾಕ್ ಅಭಿಯಾನದ ಫಲಾನುಭವಿಯಾಗುವ ನಿರೀಕ್ಷೆಯಲ್ಲಿದ್ದ ಸಿ.ಟಿ. ರವಿ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರು ಎರಚಿತ್ತು. ಆದರೆ, ಇದು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ವರದಾನವಾಗಿದೆ.
ಕಳೆದ ಕೆಲವು ತಿಂಗಳಿನಿಂದ ಶೋಭಾ ಕರಂದ್ಲಾಜೆ ಎಲ್ಲೇ ಹೋದರೂ ಗೋ ಬ್ಯಾಕ್ ಶೋಭಕ್ಕ ಅಭಿಯಾನ ಎದುರಾಗಿತ್ತು. ಆದಾಗ್ಯೂ, ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಕೃಪಕಟಾಕ್ಷದಿಂದ ಬೆಂಗಳೂರು ಉತ್ತರದಿಂದ ಶೋಭಾ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಟಿಕೆಟ್ ಘೋಷಣೆ ಬೆನ್ನಲ್ಲೇ ರೊಚ್ಚಿಗೆದ್ದಿರುವ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಬೆಂಬಲಿಗರು, ನಮ್ಮ ಕ್ಷೇತ್ರಕ್ಕೆ ಶೋಭಕ್ಕ ಬೇಡ. ಬೇರೆ ಕ್ಷೇತ್ರದ ಕಸವನ್ನು ತಂದು ನಮ್ಮಲ್ಲಿ ಸುರಿಯಬೇಡಿ ಎನ್ನುತ್ತಾ `ಗೋ ಬ್ಯಾಕ್’ ಅಭಿಯಾನ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ಬಿಜೆಪಿ ಮುಖಂಡರೋಬ್ಬರು, ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಬೇಡ. ಅವರು ನಮ್ಮ ಕ್ಷೇತ್ರದವರೂ ಅಲ್ಲ. ಹಾಗಾಗಿ, ಸ್ಥಳೀಯ ಒಕ್ಕಲಿಗ ಸಮುದಾಯದ ಬಿಜೆಪಿ ಮುಖಂಡರಿಗೆ ಆದ್ಯತೆ ನೀಡಿ, ಟಿಕೆಟ್ ಕೊಡಿ. ಅಭ್ಯರ್ಥಿ ಬದಲಾಯಿಸಿ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಮೋದಿ ಗೆಲ್ತಾರೆ, ಬಿಜೆಪಿ ಗೆಲ್ಲಬೇಕು ಅಂದರೆ ಶೋಭಾ ಕರಂದ್ಲಾಜೆ ಹಠಾವೋ, ಬೆಂಗಳೂರು ಉತ್ತರ ಬಿಜೆಪಿ ಬಚಾವೋ ಎಂಬಿತ್ಯಾದಿ ಪೋಸ್ಟರ್‌ಗಳನ್ನು ಹಿಡಿದುಕೊಂಡು, ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ.