ಬೆಂಗಳೂರು: ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿ ಬಿದ್ದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿಯವರು “ನಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳಿಕೊಳ್ಳುತ್ತಾ ಹುಸಿ ವರ್ಚಸ್ಸು ಸೃಷ್ಟಿಸಿಕೊಂಡಿದ್ದರು. ಆ ಹುಸಿ ವರ್ಚಸ್ಸಿಗೆ ಈಗ ಸರಿಯಾದ ಹೊಡೆತ ಬಿದ್ದಿದೆ ಎಂದರು. ಚುನಾವಣಾ ಬಾಂಡ್ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಒಂದಷ್ಟು ಹಣ ಬಂದಿದೆ. ಆದರೆ, ಅದು ಸಹಜವಾಗಿ ಬಂದಿರುವಂತಹದ್ದು. ಅದು ಯಾವುದೇ ಇಡಿ, ಸಿಬಿಐ ಇನ್ನಿತರ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವಂತದ್ದಲ್ಲ ಎಂದರು. ಚುನಾವಣಾ ಬಾಂಡ್ ವಿಷಯ ಇಷ್ಟಕ್ಕೇ ನಿಲ್ಲುವುದಿಲ್ಲ. ಇದರ ಆಳ ಬಹಳ ಇದೆ. ಇದು ಇನ್ನೂ ಮುಂದುವರಿಯಲಿದೆ.
ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳನ್ನೂ ತನಿಖೆಗೆ ಒಳಪಡಿಸಲಿ. ಚುನಾವಣಾ ಬಾಂಡ್ ವ್ಯವಸ್ಥೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂದು ಭಾವಿಸಲಾಗಿತ್ತು. ಆದರೆ, ಇದರ ದುರುಪಯೋಗವೇ ಜಾಸ್ತಿಯಾಗಿದೆ ಎಂದು ಅವರು ಹೇಳಿದರು.