ಲಖನೌ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ಅಗತ್ಯ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಹೇಳಿದರು.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿ, ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ತಮ್ಮ ಪಕ್ಷವು ದೊಡ್ಡ ಬಂಡವಾಳ ಶಾಹಿಗಳ ಹಾಗೂ ಶ್ರೀಮಂತರ ಹಣದ ಬಲವನ್ನು ಬಳಸುವ ಪ್ರಕ್ರಿಯೆಯಿಂದ ದೂರವಿತ್ತು. ಅಧಿಕಾರದಲ್ಲಿದ್ದಾಗ ಬಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ ಎಂದರು. ಆದರೆ ಪ್ರತಿಪಕ್ಷಗಳು ಸ್ವಾರ್ಥಕ್ಕಾಗಿಯೇ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಬಹುಜನ ಸ್ನೇಹಿ ಸರ್ಕಾರ ರಚನೆಯಾದಾಗ ಮಾತ್ರ ಜನರು ಹಣದುಬ್ಬರ, ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಹಿಂದುಳಿದಿರುವಿಕೆಯಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಪುನರುಚ್ಚರಿದರು.
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇದೇ ತಿಂಗಳು ಮಾರ್ಚ್ ೨೧ರೊಳಗೆ ಬಿಡುಗಡೆ ಮಾಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿತ್ತು.