ಗುಂಡ್ಲುಪೇಟೆ: ಪಟ್ಟಣದ ಎಸ್‍ಡಿಪಿಐ ಕಚೇರಿಯಲ್ಲಿ ಎಸ್‍ಡಿಪಿಐ ಪಕ್ಷದ 12ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ ಮಾಡಲಾಯಿತು.
ಧ್ವಜಾರೋಹಣವನ್ನು ಎಸ್‍ಡಿಪಿಐ ಪುರಸಭೆ ಸದಸ್ಯ ಎಚ್.ಆರ್.ರಾಜಗೋಪಾಲ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಎಸ್‍ಡಿಪಿಐ ಪಕ್ಷ ಸಾಮಾಜಿಕ, ರಾಜಕೀಯವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಡವರ ಪರವಾಗಿ ಕಾನೂನಾತ್ಮಕ ಹೋರಾಟಗಳ ಮುಖಾಂತರ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಕಾರ್ಯವನ್ನು ಪಕ್ಷದ ಮುಖಂಡರು ನಿರ್ವಹಿಸುತ್ತಿದ್ದಾರೆ ಎಂದರು.
ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಎಸ್‍ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‍ಡಿಪಿಐ ತಾಲೂಕು ಅಧ್ಯಕ್ಷ ಸೈಯದ್ ಅಕ್ರಮ, ಸಮಿತಿಯ ಸದಸ್ಯರಾದ ಸರ್ಪರಾಜ್ ಸೇರಿದಂತೆ ಇತರರು ಹಾಜರಿದ್ದರು.