ಮಂಡ್ಯ: ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು @ ವೆಂಕಟರಮಣೇಗೌಡ ಮತಭೇಟೆಗಿಳಿದಿದ್ದಾರೆ.
ಮನೆಮನೆಗೆ ತೆರಳಿ ಕಾಂಗ್ರೆಸ್ ಮುಖಂಡರನ್ನ ಭೇಟಿ ಮಾಡಿ ಸ್ಟಾರ್ ಚಂದ್ರು ಬೆಂಬಲ ಕೋರಿದ್ದು, ಸ್ಟಾರ್ ಚಂದ್ರುಗೆ ಶಾಸಕ ಗಣಿಗ ರವಿಕುಮಾರ್ ಸಾಥ್ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರ ಭೇಟಿ ವೇಳೆ ಹಿರಿಯ ಮಹಿಳೆ ರತ್ನಮ್ಮ ಚೆನ್ನೆಗೌಡ ಚುನಾವಣಾ ಖರ್ಚಿಗೆ ಸ್ವತಃ ಹಣ ನೀಡಿ ಆಶೀರ್ವಾದ ಮಾಡಿದ್ದಾರೆ.
ಬಳಿಕ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಮಂಡ್ಯದ ಬ್ರಾಹ್ಮಣ ಸಮುದಾಯದ ಮುಖಂಡರನ್ನ ಸ್ಟಾರ್ ಚಂದ್ರು ಭೇಟಿ ಮಾಡಿದ್ದು, ಮುಖಂಡರ ಜೊತೆ ಸಭೆ ನಡೆಸಿದ್ದಾರೆ.

ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ಸ್ಟಾರ್ ಚಂದ್ರು, ಪ್ರಚಾರ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ನೀವೇ ಗೆಲ್ತಿರಿ ಅನ್ನೋ ಮಾತನ್ನ ಕೂಡ ಹೇಳ್ತಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಮುಂದೆ ಬಗೆಹರಿಸುವ ಕೆಲಸ ಮಾಡ್ತೇನೆ. ಕಾಂಗ್ರೆಸ್ ಗ್ಯಾರಂಟಿಗಳನ್ನ ಇಟ್ಟಿಕೊಂಡು ಚುನಾವಣೆಗೆ ಮುಂದಾಗಿದ್ದೇವೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ಒಳ್ಳೆಯದಾಗುತ್ತಿದೆ. ಜನರೇ ದುಡ್ಡು ಕೊಟ್ಟು ಆಶೀರ್ವಾದ ಮಾಡ್ತಿದ್ದಾರೆ. ಜನರ ಪ್ರೀತಿ ನೋಡ್ತಿದ್ರೆ ತುಂಬಾ ಖುಷಿ ಆಗುತ್ತಿದೆ. ನಾವು ಗೆಲ್ಲೋಕೆ ಏನು ಬೇಕು ಅದನ್ನ ನಾವು ಮಾಡ್ತೇವೆ. ಜನರು ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಮಂಡ್ಯ ಜಿಲ್ಲೆಯ ಜನರು ನನ್ನ ಕೈ ಹಿಡಿಯುತ್ತಾರೆ ಅನ್ನೋ ಭರವಸೆ ಇದೆ ಎಂದರು.