Saturday, April 19, 2025
Google search engine

Homeರಾಜ್ಯನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು: ಇಂಧನ ಸಚಿವ ಜಾರ್ಜ್

ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು: ಇಂಧನ ಸಚಿವ ಜಾರ್ಜ್

ಬೆಂಗಳೂರು: ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು ನೀಡಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ನಾಗರಭಾವಿಯಲ್ಲಿರುವ ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ’  (ಕೆಆರ್‌ ಇಡಿಎಲ್) ಕೇಂದ್ರ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವರು, ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.

ಪರಿಶೀಲನಾ ಸಭೆಯಲ್ಲಿ ಕೆಆರ್‌ಇಡಿಎಲ್‌ನ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು ನೀಡುವಂತೆ ಸಲಹೆ ನೀಡಿದರು.

ಕಾರ್ಪೊರೇಟ್ ಶೈಲಿಯ ಕಾರ್ಯ ವಿಧಾನ ಅಳವಡಿಸಿಕೊಳ್ಳವ ಜತೆಗೆ, ಯೋಜನೆಯ ಅನುಷ್ಠಾನಕ್ಕೆ ನವೀನ ಮಾರ್ಗಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸಚಿವರು ಕಿವಿ ಮಾತು ಹೇಳಿದರು.  

“ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು  ಇಂಧನ ಸಂರಕ್ಷಣೆಗೆ ಒತ್ತು ನೀಡಿ, ಇಂಧನ ದಕ್ಷತೆ ಸಾಧಿಸುವ ಮೂಲಕ ರಾಜ್ಯ ವಲಯದಲ್ಲಿ ಮುಂಚೂಣಿ ಸಾಧಿಸುವಂತಾಗಬೇಕು,” ಎಂದರು.

ಕೆಆರ್‌ಇಡಿಎಲ್ ಕ್ಯಾಂಪಸ್‌ನಲ್ಲಿರುವ  ಸೋಲಾರ್ ಸ್ಮಾರ್ಟ್ ಬೆಂಚ್, ಪಿಕೊ ಹೈಡ್ರೋದ ಕಾರ್ಯನಿರ್ವಹಣೆಯನ್ನು ಸಚಿವರು ವೀಕ್ಷಿಸಿದರು. ಜತೆಗೆ, ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗಿರುವ SCADA (ವಿದ್ಯುತ್ ಯೋಜನೆಗಳಿಂದ ಲಭ್ಯವಾಗುವಂಥ ನೈಜ-ಸಮಯದ ಡೇಟಾ) ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.

ಹೆಚ್ಚುವರಿ ಇಂಧನವನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗೆ ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಧಾರವಾಡ, ರಾಯಚೂರು, ವಿಜಯನಗರ, ವಿಜಯಪುರ, ತುಮಕೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಐಎಸ್‌ಟಿಎಸ್ ಯೋಜನೆಯಡಿ 5 ಗಿ.ವ್ಯಾ ಸಾಮರ್ಥ್ಯದ  (ಸೌರ ಮತ್ತು ಗಾಳಿ) ಹೈಬ್ರಿಡ್ ಪಾರ್ಕ್ ಸ್ಥಾಪನೆ. ಔರಾದ್‌ನಲ್ಲಿ 500 ಮೆ.ವ್ಯಾ ಸಾಮರ್ಥ್ಯದ ಫ್ಲೋಟಿಂಗ್ ಸೌರ ಯೋಜನೆ-‘ಬೀದರ್ ಸೋಲಾರ್ ಪಾರ್ಕ್’, ಕುಸುಮ್ ಬಿ & ಸಿ, ಹಸಿರು ಜಲಜನಕ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು.

ಕೌಶಲ್ಯಾಭಿವೃದ್ಧಿ ಕೇಂದ್ರ, ಇನ್‌ ಕ್ಯುಬೇಶನ್ ಸೆಂಟರ್ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ವೃತ್ತಿಪರ ಇಂಟರ್ನ್‌ ಶಿಪ್ ಆರಂಭಿಸುವ ಹೊಸ ಉಪಕ್ರಮಗಳ ಬಗ್ಗೆಯೂ ಸಚಿವರು ವಿಸ್ತೃತ ಚರ್ಚೆ ನಡೆಸಿದರು. ಜತೆಗೆ, ಈ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಆರ್‌ಇಡಿಎಲ್‌ ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular