ಹೊಸದಿಲ್ಲಿ: ದಾರಿತಪ್ಪಿಸುವಂತಹ ಜಾಹೀರಾತುಗಳನ್ನು ಪ್ರಕಟಿಸಿದ ಪ್ರಕರಣದಲ್ಲಿ ಪತಂಜಲಿ ಸಹ-ಸ್ಥಾಪಕ ರಾಮದೇವ್ ಮತ್ತು ಕಂಪೆನಿಯ ಆಡಳಿತ ನಿರ್ದೇಶಕ ಬಾಲಕೃಷ್ಣ ಇಬ್ಬರಿಗೂ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
ವಿವಿಧ ಕಾಯಿಲೆಗಳನ್ನು ಗುಣಪಡಿಸುವುದೆಂದು ಹೇಳಿಕೊಂಡು ದಾರಿತಪ್ಪಿಸುವಂತಹ ಜಾಹೀರಾತುಗಳನ್ನು ಪತಂಜಲಿ ಆಯುರ್ವೇದ ಸಂಸ್ಥೆ ಪ್ರಕಟಿಸುವುದನ್ನು ಮುಂದುವರಿಸಿದಾಗ ನ್ಯಾಯಾಲಯ ಈ ಹಿಂದೆ ನ್ಯಾಯಾಂಗ ನಿಂದನೆ ನೋಟಿಸ್ ಅನ್ನು ಸಂಸ್ಥೆಗೆ ಜಾರಿಗೊಳಿಸಿತ್ತು. ಇಂತಹ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ಪತಂಜಲಿಯ ವಕೀಲರು ಕಳೆದ ನವೆಂಬರ್ ತಿಂಗಳಿನಲ್ಲಿ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಹೊರತಾಗಿಯೂ ಜಾಹೀರಾತು ಪ್ರಕಟಣೆ ಮುಂದುವರಿದಾಗ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು.
ಆದರೆ ಈ ನೋಟಿಸ್‌ಗೆ ಯಾವುದೇ ಉತ್ತರವನ್ನು ನೀಡಲಾಗಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಅವರಿಗೆ ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದೆ.