ಮಡಿಕೇರಿ : ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಜನರು ಮತದಾನದಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಅಂಚೆ ಮತಪತ್ರಗಳ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಚೆ ಮತಪತ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು. ಪೋಸ್ಟಲ್ ಬ್ಯಾಲೆಟ್ ಆನ್‌ಲೈನ್ ಮೂಲಕ ಮಾದರಿ 12D ಅನ್ನು ಡೌನ್‌ಲೋಡ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
85 ವರ್ಷ ಮೇಲ್ಪಟ್ಟವರು, ಅಂಗವಿಕಲರು ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದಷ್ಟು ಮತದಾನ ಕೇಂದ್ರಗಳಿಗೆ ತೆರಳಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದವರು ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಬಹುದು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದರೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶವಿರುವುದಿಲ್ಲ. ಈ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ದಿನಾಂಕದೊಳಗೆ ಅಂಚೆ ಮತಪತ್ರ ವಿತರಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 85+ ಮತ್ತು ಶೇ. 40 ವಿಕಲಚೇತನ ಮತದಾರರು ವಿವರಗಳನ್ನು ಹೊಂದಿರುವ ಪಟ್ಟಿಗೆ ಗಮನ ಕೊಡಬೇಕು. ವಲಯ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾದರಿ-12ಡಿ ವಿತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಮಾದರಿಯನ್ನು ವಿತರಿಸಿದ ಅಂಕಿಅಂಶಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ವಿತರಿಸಿದ ಅಂಚೆ ಪತ್ರಗಳನ್ನು ಆದಷ್ಟು ಬೇಗ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಅಗತ್ಯ ಸೇವೆಗಳ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 12 ಇಲಾಖೆಗಳು ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಅಂಚೆ ಮತಪತ್ರ ಪಟ್ಟಿಯನ್ನು ಕಳುಹಿಸಲಾಗಿದೆ. ಅದೇ ರೀತಿ 85 ವರ್ಷ ವಯೋಮಿತಿ 5,000 ಹಾಗೂ 4 ಸಾವಿರಕ್ಕೂ ಹೆಚ್ಚು ವಿಕಲಚೇತನರಿದ್ದಾರೆ ಎಂದು ಮಾಹಿತಿ ನೀಡಿದರು.
ಅಂಚೆ ಮತಪತ್ರದ ನೋಡಲ್ ಅಧಿಕಾರಿ ಅನಿತಾ ಭಾಸ್ಕರ್, ಎನ್ ಐಸಿಯ ಅಜಿತ್ ಅಂಚೆ ಮತಪತ್ರದ ಕುರಿತು ಹಲವು ಮಾಹಿತಿ ನೀಡಿದರು. ಕೆ.ಸಿ.ದಯಾನಂದ, ವಿಜಯ್, ನಾಗರಾಜ್ ಆಚಾರ್, ಸಂಜಯ್ ಕುಮಾರ್ ಇತರರು ಇದ್ದರು.