ಮೈಸೂರು: ಮನುಷ್ಯನಿಗೆ ಎಷ್ಟೇ ಸಂಪತ್ತು, ಐಶ್ವರ್ಯ ಇದ್ದರೂ ಸಹ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಮನುಷ್ಯನ ಬದುಕೇ ಶೂನ್ಯವಾಗುತ್ತದೆ ಎಂದು ಮೂಡಾ ಅಧ್ಯಕ್ಷ ಕೆ.ಮರೀಗೌಡ ಹೇಳಿದರು.
ಮೈಸೂರು ತಾಲ್ಲೂಕು ಮಾಕನಹುಂಡಿ ಗ್ರಾಮದಲ್ಲಿ ಶನಿದೇವರ ಗುಡ್ಡಪ್ಪ ದಿವಂಗತ ಪುಟ್ಟಸ್ವಾಮಿಯವರ ಮೊದಲನೆ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಪುಟ್ಟಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಗುಡ್ಡಪ್ಪರವರು ಶನಿದೇವರ ಮಹಾಭಕ್ತರಾಗಿದ್ದರು ಸಾವಿರಾರು ಜನರು ಈ ದೇವಸ್ಥಾನಕ್ಕೆ ಅಕ್ಕಪಕ್ಕದ ಊರುಗಳಿಂದಲ್ಲದೆ, ಮೈಸೂರು ಬೆಂಗಳೂರಿನಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅವರ ನೆನಪಿನಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ತಜ್ಞ ವೈದ್ಯರುಗಳಿಂದ ಕಣ್ಣಿನ ತಪಾಸಣೆ, ರಕ್ತಪರೀಕ್ಷೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆಗಳನ್ನು ನಡೆಸಿ ಉಚಿತ ಔಷಧಿಗಳನ್ನು ನೀಡುವುದರೊಂದಿಗೆ ಉತ್ತಮ ಕೆಲಸಗಳನ್ನು ಮಾಡಿದ್ದೀರಿ ಗುಡ್ಡಪ್ಪನವರ ಹೆಸರು ಈ ದೇವಸ್ಥಾನ ಇರುವವರೆಗೂ ಚಿರಸ್ಥಾಯಿಯಾಗಿರುತ್ತದೆ. ಅವರ ಹೆಸರಿನಲ್ಲಿ ಇದೇ ರೀತಿ ಇನ್ನೂ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಅವರ ಹೆಸರನ್ನು ಚಿರಸ್ಥಾಯಿಯಾಗಿಡಲು ಪ್ರಯತ್ನಿಸಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ರವಿ, ಗುಡ್ಡಪ್ಪ ರವಿಕುಮಾರ್, ಡಾ. ರವಿ, ಸರ್ಕಲ್ ಇನ್ಸ್‌ಪೆಕ್ಟರ್ ಜೆ.ಹೆಚ್. ಗಣೇಶ್, ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಜಿ.ಪಂ ಮಾಜಿ ಸದಸ್ಯ ಪಟೇಲ್ ಜವರೇಗೌಡ, ಶಿವಣ್ಣ, ಚಂದ್ರಶೇಖರ್ ಸ್ವಾಮಿ, ಧನಗಳ್ಳಿ ಬಸವರಾಜು, ರವಿ ಬಿ, ನಾಗರಾಜ್ ಹಾಜರಿದ್ದರು. ಶಿಬಿರದಲ್ಲಿ ೩೪ ಜನ ರಕ್ತದಾನ ಮಾಡಿದರು, ೫೦೦ ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.