ಚಾಮರಾಜನಗರ: ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಪಕ್ಷಿ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡುವ ಹೊಣೆ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ನಡೆದ ವಿಶ್ವಗುಬ್ಬಚ್ಚಿ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುಬ್ಬಚ್ಚಿ ಒಂದು ಅತ್ಯಂತ ಚಿಕ್ಕ ಪಕ್ಷಿಯಾಗಿದ್ದು, ಸುಮಧುರ ಚಿಲಿಪಿಲಿಯ ಗಾಯನದೊಂದಿಗೆ ಪರಿಸರದಲ್ಲಿ ಬಹಳ ಸಂತೋಷವನ್ನು ನೀಡುತ್ತದೆ.
ಆಹಾರ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪಕ್ಷಿಯಾಗಿದೆ. 25ರಿಂದ 40 ಗ್ರಾಂ ಇರುವ ಗುಬ್ಬಚ್ಚಿಯನ್ನು ಎಲ್ಲರೂ ಅತ್ಯಂತ ಪ್ರೀತಿಯಿಂದ, ಖುಷಿಯಿಂದ, ಆನಂದದಿಂದ ವೀಕ್ಷಿಸುತ್ತಾರೆ. ಆದರೆ ಇಂದು ಅನೇಕ ಕಾರಣಗಳಿಂದ ಗುಬ್ಬಚ್ಚಿಯ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ.
ಗುಬ್ಬಚ್ಚಿಯ ಸಂಖ್ಯೆ ಹೆಚ್ಚಳವಾಗಲು ಸೂಕ್ತ ಪರಿಸರ ನಿರ್ಮಾಣ, ಮರ ಗಿಡಗಳ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಉತ್ತಮ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ. ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವಗುಬ್ಬಚ್ಚಿಯ ದಿನವೆಂದು ಆಚರಿಸಿ ಜಾಗೃತಿಯ ಮೂಡಿಸುವ ಕಾರ್ಯ ವಿಶ್ವದಲ್ಲೇಡೆ ನಡೆಯುತ್ತಿದೆ.
ಪಕ್ಷಿಗಳ ಸಂರಕ್ಷಣೆಗಾಗಿ ಪಕ್ಷಿಧಾಮಗಳನ್ನು ಆರಂಭಿಸುವುದು, ಮರ ಗಿಡಗಳನ್ನು ನೆಡುವುದು ,ಗೂಡುಗಳನ್ನು ಮರಗಳಿಗೆ ಕಟ್ಟುವುದು ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಪವನ್, ತೇಜಸ್, ಶ್ರಾವ್ಯ, ಧನ್ ಬಹದ್ದೂರ್ ಸಿಂಗ್, ಗಣೇಶ್ ಇದ್ದರು