ಸಾಲಿಗ್ರಾಮ: ಶರೀರದ ಆರೋಗ್ಯಕ್ಕಾಗಿ ಶಾರೀರಿಕ ಯೋಗ, ಮನಸ್ಸಿನ ಆರೋಗ್ಯಕ್ಕಾಗಿ ಮನಸ್ಸಿನ ಮುಖಾಂತರ ಮಾಡುವ ಧ್ಯಾನ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮೈಸೂರಿನ ವಿಜಯನಗರ ಸೇವಾ ಕೇಂದ್ರದ ಬ್ರಹ್ಮಕುಮಾರಿ ಸಂಧ್ಯಾಜಿ ಹೇಳಿದರು. ಅವರು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯದ ಜೊತೆಗೆ ಮನಸ್ಸು ಸಹ ಆರೋಗ್ಯವಾಗಿರಬೇಕು. ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರಬೇಕು ಮನಸ್ಸಿನ ಪ್ರಭಾವ ಶರೀರದ ಮೇಲೆ ಬಹಳ ಬೀರುತ್ತದೆ ಎಂದರು. ಶರೀರದ ಸ್ವಚ್ಛತೆಯ ಜೊತೆ ಜೊತೆಗೆ ಮನಸ್ಸು ಸ್ವಚ್ಛವಾಗಿರಬೇಕು ಅದಕ್ಕಾಗಿ ಧ್ಯಾನ ಅತ್ಯವಶ್ಯಕ. ಇಂದಿನ ವಿಜ್ಞಾನದ ಅನುಸಾರ ಶೇಕಡ ೭೮ ರಷ್ಟು ಕಾಯಿಲೆಗಳು ಯಾವುದು ಬರುತ್ತೋ ಅವುಗಳು ಮನಸ್ಸಿನ ಪ್ರಭಾವ ಮನುಷ್ಯನ ಮೇಲೆ ಬಿದ್ದು ಶರೀರಕ್ಕೆ ಕಾಯಿಲೆಗಳು ಬರುತ್ತಿವೆ ಎಂದರು. ಆಧ್ಯಾತ್ಮಿಕತೆ ಹಾಗೂ ಜ್ಞಾನದ ಮುಖಾಂತರ ರಾಜ್ಯ ಯೋಗದ ಆಧಾರದಿಂದ ನಾವು ನಮ್ಮ ಮನಸ್ಸಿನ ಸ್ಥಿತಿಯನ್ನು ಸ್ಥಿರವಾಗಿ, ಖುಷಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಆಧ್ಯಾತ್ಮಿಕ ಸಂಸ್ಥೆಯಾದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯವು ಪ್ರತಿಯೊಬ್ಬ ಮಾನವ ಕುಲ ಕೋಟಿಯ ಎಲ್ಲರ ಮನಸ್ಸು ಶಾಂತಿಯಿಂದ, ಸುಖದಿಂದ, ಆನಂದದಿಂದ, ಪ್ರಪುಲ್ಲಿತವಾಗಿ, ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಸದಾಕಾಲ ಇರಬೇಕು ಎಂಬ ಗುರಿ ಉದ್ದೇಶವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.
ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರುಗಳು, ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿಯವರು, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಾಲಿಗ್ರಾಮ ಕೇಂದ್ರದ ಶಿಲ್ಪ ಸಹೋದರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಎಸ್.ಕೆ.ವತ್ಸಲ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸುಧಾ ರೇವಣ್ಣ, ಡಾ.ರಾಜಕುಮಾರ್ ವೇದಿಕೆಯ ಎಸ್.ಬಿ.ಗುಣಚಂದ್ರಕುಮಾರ್, ಶಾಲಾ ಅಭಿವೃದ್ಧಿ ಸಮಿತಿಯ ಬೊಮ್ಮರಾಯಿಗೌಡ, ಜಯರಾಮ್, ಮುಖ್ಯ ಶಿಕ್ಷಕ ಸುಬ್ಬೇಗೌಡ, ಶಿಕ್ಷಕರಾದ ಸತೀಶ್, ಮಧುಕುಮಾರ್, ಮಹೇಶ್, ಪುನೀತ್, ಜಯಕುಮಾರ್, ಮಮತ, ಮಲ್ಲಮ್ಮ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿಯವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.