ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಪೋಸ್ಟ್ ಹಾಕಿದ ಆರೋಪದ ಮೇಲೆ ಮಾಜಿ ಸಚಿವ ಸಿಟಿ ರವಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿಟಿ ರವಿ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಬರೆದುಕೊಂಡಿದ್ದ ಪೋಸ್ಟ್ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣ ಸಮಿತಿಯ ಸಹಾಯಕ ಚುನಾವಣಾಧಿಕಾರಿಯೊಬ್ಬರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ದೂರಿನ ಮೇರೆಗೆ ಪೊಲೀಸರು ಎಪ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಿ.ಟಿ.ರವಿ ಅವರು ಎಕ್ಸ್ ನಲ್ಲಿ, ಸಾಗರದ ಆಳವನ್ನಾದರೂ ಅಳೆಯಬಹುದು, ಆದರೆ ರಾಹುಲ್ ಗಾಂಧಿ ಮನಸಿನಲ್ಲಿ ಹಿಂದೂಗಳು ಮತ್ತು ಹಿಂಧೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಅಳೆಯಲಾಗದು. ರಾಹುಲ್ ಗಾಂಧಿ ಅವರು, ಶಕ್ತಿ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬುದಕ್ಕೆ ವಿಶೇಷ ಅರ್ಥ, ಗೌರವ ಇದೆ, ಇದರ ವಿರುದ್ಧ ಹೋರಾಟ ಮಾಡುವವರು, ಹಿಂದೂ ದರ್ಮದ ವಿರೋಧಿಗಳು ಎಂದು ಬರೆದುಕೊಂಡಿದ್ದರು.