ಮೈಸೂರು: ಶ್ರೀ ಸುತ್ತೂರು ಮಠದಲ್ಲಿ ಇದೇ ಮಾರ್ಚ್ ೨೫ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೫ರ ಅಂಗವಾಗಿ ಉಸ್ತಾದ್ ಸರ್ಫರಾಜ್ ಖಾನ್ ಮತ್ತು ಉಸ್ತಾದ್ ಫರಾಜ್ ಖಾನ್‌ರವರಿಂದ ದ್ವಂದ್ವ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಉಸ್ತಾದ್ ಸರ್ಫರಾಜ್ ಖಾನ್ ಮತ್ತು ಉಸ್ತಾದ್ ಫರಾಜ್ ಖಾನ್‌ರವರು ಸಂಗೀತದ ಕೌಟುಂಬಿಕ ಹಿನ್ನೆಲೆಯುಳ್ಳವರು. ಸಾರಂಗಿ ನುಡಿಸುವುದರಲ್ಲಿ ನಿಷ್ಣಾತರಾಗಿದ್ದ ಇವರ ತಾತ ಉಸ್ತಾದ್ ಅಬ್ದುಲ್ ಖಾದರ್ ಖಾನ್‌ರವರು ಧಾರವಾಡ ಆಕಾಶವಾಣಿಯಲ್ಲಿದ್ದರು. ಮುತ್ತಾತ ಉಸ್ತಾದ್ ಷೇಕ್ ಅಬ್ದುಲ್ಲಾ ಖಾನ್‌ರವರು ಸಾರಂಗಿ ವಾದನದಲ್ಲಿ ಪರಿಣತರಾಗಿದ್ದರಲ್ಲದೆ, ಮೈಸೂರು ಅರಮನೆ ಮತ್ತು ಹೈದರಾಬಾದ್ ನವಾಬರ ಆಸ್ಥಾನಗಳಲ್ಲಿ ವಿದ್ವಾಂಸರಾಗಿದ್ದರು. ತಂದೆ ಉಸ್ತಾದ್ ಫಯ್ಯಾಜ್ ಖಾನ್‌ರವರು ಉತ್ತಮ ಹಿಂದೂಸ್ತಾನಿ ಸಂಗೀತಗಾರರು ಮತ್ತು ಸಾರಂಗಿ ಕಲಾವಿದರು; ಅಂತಾರಾಷ್ಟ್ರೀಯ ಮಟ್ಟದ ಖ್ಯಾತರು. ಸರ್ಫರಾಜ್ ಮತ್ತು ಫರಾಜ್ ಇಬ್ಬರೂ ತಮ್ಮ ತಂದೆಯವರ ಬಳಿ ಚಿಕ್ಕ ವಯಸ್ಸಿನಿಂದಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಪದ್ಮವಿಭೂಷಣ ಪಂ. ರಾಮ್‌ನಾರಾಯಣ್‌ರವರಲ್ಲಿ ಸರ್ಫರಾಜ್‌ರವರು ೨೦೧೧ರಿಂದ ಸಾರಂಗಿಯನ್ನು ಕಲಿಯುತ್ತಿದ್ದಾರೆ. ಡಾ. ರಾಜೀವ್ ತಾರಾನಾಥ್‌ರವರ ಬಳಿ ಫರಾಜ್ರವರು ಸರೋದ್ ವಾದನ ಕಲಿಯುತ್ತಿದ್ದಾರೆ. ಹಿಂದೂಸ್ತಾನಿ ಸಂಗೀತವನ್ನು ಇಬ್ಬರೂ ತಂದೆಯವರ ಉಸ್ತುವಾರಿಯಲ್ಲಿಯೇ ಮುಂದುವರಿಸುತ್ತಿದ್ದಾರೆ. ಇವರ ಪೈಕಿ ಸರ್ಫರಾಜ್ ಆಕಾಶವಾಣಿಯ ಎ ಶ್ರೇಣಿ ಕಲಾವಿದರು.
ಈ ಕಲಾವಿದರು ಸಂಗೀತ ಕುಟುಂಬದ ಒಂಬತ್ತನೆಯ ತಲೆಮಾರಿಗೆ ಸೇರಿದವರು ಎಂಬುದು ವಿಶೇಷ. ಇವರಿಬ್ಬರೂ ದೇಶವಿದೇಶಗಳಲ್ಲಿ ಮತ್ತು ಹಲವಾರು ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ಗಾಯನವನ್ನು ಪ್ರಸ್ತುತಿ ಪಡಿಸಿದ್ದಾರೆ. ಸಾಮಾನ್ಯ ಶ್ರೋತೃಗಳು ಮತ್ತು ಪ್ರಬುದ್ಧ ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಧಾರವಾಡದ ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್, ಮೀರಜ್‌ನ ಉಸ್ತಾದ್ ಅಬ್ದುಲ್ ಕರೀಂ ಖಾನ್ ಮ್ಯೂಸಿಕ್ ಫೆಸ್ಟಿವಲ್, ಭೂಪಾಲದ ಪದ್ಮಶ್ರೀ ಉಸ್ತಾದ್ ಅಬ್ದುಲ್ ಲತೀಫ್ ಖಾನ್ ಸಂಗೀತ್ ಸಮಾರೋಹ್, ಸಿಂಗಪೂರದ ಫಿಫ್ತ್ ನೋಟ್ ಗ್ಲೋಬಲ್ ಸೆಂಟರ್ ಆಫ್ ಎಕ್ಸೆಲೆನ್ಸಿ, ದುಬೈನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಇವುಗಳಲ್ಲದೆ, ಯೂರೋಪ್ ದೇಶಗಳಲ್ಲಿಯೂ ಸಂಗೀತದಿಂದ ಜನಪ್ರಿಯತೆ ಗಳಿಸಿದ್ದಾರೆ. ಹಿಂದೂಸ್ತಾನಿ ಗಾಯನ ಹಾಗೂ ಸಂಗೀತ, ಸಾರಂಗಿ-ಸರೋದ್ ದ್ವಂದ್ವ ವಾದನಗಳ ಮೂಲಕ ಖ್ಯಾತರಾಗಿದ್ದಾರೆ.
ಹಾರ್ಮೋನಿಯಂ ಸಹಕಾರ ನೀಡಲಿರುವ ಪಂ. ವೀರಭದ್ರಯ್ಯ ಹಿರೇಮಠರವರು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಪಂ. ಪುಟ್ಟರಾಜ ಗವಾಯಿಗಳ ಶಿಷ್ಯರು. ಗುರುಕುಲ ಪದ್ಧತಿಯಲ್ಲಿ ಸಂಗೀತವನ್ನು ಅಭ್ಯಾಸ ಮಾಡಿರುವರು. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ಸಂಗೀತ ವಿಶಾರದ’ ಪದವೀಧರರು. ಅತ್ಯುತ್ತಮ ಹಾರ್ಮೋನಿಯಂ ವಾದಕರು. ಗದುಗಿನ ಗಾನಗಂಧರ್ವ ಕಲಾ ಟ್ರಸ್ಟ್ ಇವರಿಗೆ ಗಾನಶ್ರೀ’ ಬಿರುದನ್ನು ನೀಡಿ ಸನ್ಮಾನಿಸಿದೆ. ಮೈಸೂರಿನಲ್ಲಿ ಸ್ವರಸಂಕುಲ ಸಂಗೀತಶಾಲೆಯನ್ನು ಪ್ರಾರಂಭಿಸಿ ಹಿಂದೂಸ್ತಾನಿ ಕಲಾವಿದರುಗಳನ್ನು ರೂಪಿಸುತ್ತಿದ್ದಾರೆ; ಹಿಂದೂಸ್ತಾನಿ ಸಂಗೀತದ ಪ್ರಸಾರಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ತಬಲ ವಾದನ ಸಾಥ್ ನೀಡಲಿರುವ ಪಂ. ಸುಮಿತ್ ನಾಯಕ್‌ರವರು ಕೇರಳ ಮೂಲದವರು. ತಂದೆ ಶ್ರೀ ಸುಧಾಕರ್ ನಾಯಕ್ ಮತ್ತು ತಾಯಿ ಶ್ರೀಮತಿ ಮೀರಾ ಅವರಿಂದ ಸಂಗೀತದ ಪ್ರಾರಂಭಿಕ ಶಿಕ್ಷಣ. ಕೊಚ್ಚಿಯ ವಿದ್ವಾನ್ ನವೀನ್ ಪೈಯವರಿಂದ ತಬಲ ವಾದನದ ಆರಂಭಿಕ ಕಲಿಕೆ. ಬಳಿಕ ಬೆಂಗಳೂರಿನ ಹಿರಿಯ ತಬಲಾ ಕಲಾವಿದರಾದ ಡಾ. ಉದಯರಾಜ್ ಕರ್ಪೂರ್‌ರವರಲ್ಲಿ ಮುಂದುವರಿದ ತಾಲೀಮು. ಏಕವ್ಯಕ್ತಿ ಕಾರ್ಯಕ್ರಮಗಳ ಜೊತೆಗೆ ಹಲವಾರು ಜನ ಹಿರಿಯ ವಿದ್ವಾಂಸರುಗಳಿಗೆ ತಬಲ ಸಹಕಾರ ನೀಡಿರುವ ಅನುಭವ. ಯೂರೋಪ್ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ನಾದಯಾನ. ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದ ಬಿಇ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್) ಪದವೀಧರರು. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ತಬಲದಲ್ಲಿ ಸ್ನಾತಕೋತ್ತರ ಪದವಿ. ಅಖಿಲ ಭಾರತ ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.