ಯಳಂದೂರು: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಪಟ್ಟಣ ಪಂಚಾಯಿತಿ ನೌಕರರು ಗುರುವಾರ ಬೈಕ್ ಜಾಥ ಮಾಡುವ ಮೂಲಕ ಚುನಾವಣಾ ಜಾಗೃತಿಯನ್ನು ಮೂಡಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಿಂದ ಹೊರಟು ಪಟ್ಟಣದ ಕೆಕೆ ರಸ್ತೆ, ಹಳೇ ಅಂಚೆಕಚೇರಿ ರಸ್ತೆ, ಬಳೇಪೇಟೆ, ದೊಡ್ಡಂಗಡಿ ಬೀದಿ, ಬಸ್ ನಿಲ್ದಾಣ ಹಾಗೂ ಸಂತೆಮರಹಳ್ಳಿ ರಸ್ತೆಗಳಲ್ಲಿ ಬೈಕ್‌ನಲ್ಲಿ ಚಲಿಸಿ ಮತದಾನ ಜಾಗೃತಿ ಜಾಥವನ್ನು ನಡೆಸಿದರು. ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, ಭಾರತ ವಿಶ್ವದ ಶ್ರೇಷ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಮತದಾನದ ಮೂಲಕ ನಮ್ಮನ್ನಾಳುವರನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯನ್ನು ಹಬ್ಬವೆಂದು ಸಂಭ್ರಮಿಸಬೇಕು. ಪ್ರತಿಯೊಬ್ಬರೂ ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕು
ನಮ್ಮ ರಾಷ್ಟ್ರದಲ್ಲಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತದಾನ ನಡೆಯುತ್ತಿಲ್ಲ. ಶೇಕಡವಾರು ಮತದಾನದಲ್ಲಿ ನಾವು ಇನ್ನೂ ಹಿಂದೆ ಬಿದ್ದಿದ್ದೇವೆ. ಯುವ ಮತದಾರರು ಹೆಚ್ಚಾಗಿದ್ದರೂ ಮತದಾನ ಮಾಡುತ್ತಿಲ್ಲ. ಪ್ರತಿ ೫ ವರ್ಷಕ್ಕೊಮ್ಮೆ ಬರುವ ಚುನಾವಣೆಯ ಮಹತ್ವದ ಅರಿವನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕು. ನಮ್ಮ ದೇಶಕ್ಕೆ, ರಾಜ್ಯಕ್ಕೆ, ಸ್ಥಳೀಯ ಸಂಸ್ಥೆಗಳಿಗೆ ನಮ್ಮನ್ನಾಳುವ ಸದೃಢ ರಾಜಕಾರಣಿಗಳನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆ ದೇಶದ ಪ್ರಗತಿಯ ದ್ಯೋತಕವಾಗಿದೆ. ಇಂತಹ ಸಂಭ್ರಮವನ್ನು ಹಬ್ಬವಾಗಿ ಪರಿವರ್ತಿಸುವ ಜರೂರತ್ತು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿದೆ.
ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಮತದಾನ ನಡೆಸಲಾಗುತ್ತದೆ. ಇದು ಪೋಲಾಗದಂತೆ ತಡೆಯಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶೇ ೧೦೦ ರಷ್ಟು ಮತದಾನ ಮಾಡುವಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಜೆಇ ನಾಗೇಂದ್ರ, ಮಲ್ಲಿಕಾರ್ಜುನಸ್ವಾಮಿ, ರಘು, ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂಧಿ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.