ಬೆಂಗಳೂರು: ಮಗುವನ್ನು ದತ್ತು ಪಡೆಯುವಾಗ ಪಾಲಿಸಬೇಕಾದ ನಿಯಮಗಳ ಪಾಲನೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ಕಾನೂನು ಪರಿವೀಕ್ಷಣಾಧಿಕಾರಿ ಗೀತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೋನು ಶ್ರೀನಿವಾಸ ಗೌಡ ಒಂದು ಮಗುವನ್ನು ದತ್ತು ಪಡೆದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆದರೆ ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಮಗುವನ್ನು ಸಾಕಿ ಸಲಹುವಷ್ಟು ಪೋಷಕರಲ್ಲಿ ಆರ್ಥಿಕ ಸಾಮರ್ಥ್ಯ ಇದ್ಯಾ ಎಂಬುದನ್ನು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಸೋನು ಶ್ರೀನಿವಾಸ್ ಗೌಡ ಮದುವೆ ಸಹ ಆಗಿಲ್ಲ. ದತ್ತು ಪಡೆಯುವವರು ಹಾಗು ಮಗುವಿನ ವಯಸ್ಸಿನ ಅಂತರ ೨೫ ವರ್ಷ ಇರಬೇಕಾಗುತ್ತದೆ.
ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ ೧೯೫೬ರ ಪ್ರಕಾರ ದತ್ತು ಪಡೆಯುವ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದಕ್ಕೋಸರ ಮಕ್ಕಳ ರಕ್ಷಣಾ ಘಟಕ, ರಾಜ್ಯ ದತ್ತು ಪ್ರಾಧಿಕಾರ, ಆಕೆ ನೆಲೆಸಿರುವ ಅರ್ಜಿ ವಿಳಾಸ ಎಲ್ಲಾ ಮಾಹಿತಿಗಳನ್ನು ಪಡೆದು ಎಲ್ಲಾ ನಿಯಮಗಳನ್ನು ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಮಕ್ಕಳನ್ನು ದತ್ತು ಪಡೆಯಬೇಕು.
ಬಾಲ ನ್ಯಾಯ ಕಾಯಿದೆ ೨೦೦೦ ಕಲಂ ೨೯ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಮಿತಿ ಆದೇಶದ ಪ್ರಕಾರವೇ ದತ್ತು ನೀಡಬೇಕು.