ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ನಡೆದು ಇಂದಿಗೆ 8 ವರ್ಷಗಳಾಗಿವೆ. ಆದರೆ ಬಾಳಿಗಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ವಿಚಾರವಾದಿ, ಸಾಮಾಜಿಕ ಹೋರಾಟಗಾರ ಪ್ರೊ. ನರೇಂದ್ರ ನಾಯಕ್ ಆರೋಪಿಸಿದ್ದಾರೆ.
ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರರು ನಗರದ ಕಾರ್‌ಸ್ಟ್ರೀಟ್‌ನ ಶ್ರೀ ವೆಂಕರಮಣ ದೇವಸ್ಥಾನದ ಮುಂದೆ ಆಯೋಜಿಸಿದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿನಾಯಕ ಬಾಳಿಗಾ ಕೊಲೆಯಾಗಿ ಇಂದಿಗೆ 8 ವರ್ಷವಾಗಿದೆ. ಪ್ರತೀ ವರ್ಷವೂ ನಾವು ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದೇವೆ. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಬಿಜೆಪಿಯ ಸಂಸದರು, ಶಾಸಕರು ಹತ್ಯೆಯಾದ ವಿನಾಯಕ ಬಾಳಿಗಾರ ಮನೆಗೆ ಭೇಟಿ ನೀಡಲಿಲ್ಲ. ಕೊಲೆಯಾದಾಗ ಶಾಸಕರಾಗಿದ್ದ ಜೆಆರ್ ಲೋಬೊ ಮೊಸಳೆ ಕಣ್ಣೀರು ಸುರಿಸಿದರು. ಬಳಿಕ ಅವರು ಮೌನ ವಹಿಸಿದ್ದಾರೆ. ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ ಎರಡು ವರ್ಷದ ಹಿಂದೆ ಇದೇ ಸ್ಥಳದಲ್ಲಿ ನಿಂತು ಭರವಸೆಯ ಮಾತುಗಳನ್ನಾಡಿದ್ದರು. ಆದರೆ ಇನ್ನೂ ಅವರು ಭರವಸೆ ಈಡೇರಿಸಿಲ್ಲ. ಕೊಲೆ ಪ್ರಕರಣದ ಆರೋಪಿಯೊಬ್ಬ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೊಬ್ಬರ ಜೊತೆ ತಿರುಗಾಡುತ್ತಿದ್ದಾನೆ ಎಂದು ಪ್ರೊ. ನರೇಂದ್ರ ನಾಯಕ್ ಆರೋಪಿಸಿದರು.