ವಿಜಯಪುರ: ಇದು ನನ್ನ ಕೊನೆಯ ಚುನಾವಣೆ. ಕಳೆದ ಬಾರಿ 2.60 ಲಕ್ಷ ಮತಗಳಿಂದ ಗೆದ್ದಿದ್ದೆ. ಈ ಬಾರಿ 2.70 ಲಕ್ಷ ಮತಗಳಿಂದ ಗೆಲ್ಲಲಿದ್ದೇನೆ. ಕನಿಷ್ಟ ಒಂದು ವೋಟ್ ನಿಂದಾದರೂ ಗೆಲ್ಲುವುದು ನಾನೇ ಎಂದು ಹಾಲಿ ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಮೇಶ ಜಿಗಜಿಣಗಿ, ಈ ಸಲ ನಾನು ನನ್ನ ಮಕ್ಕಳು ಟಿಕೆಟ್ ಬೇಡ ಎಂದು ನಿರ್ಧರಿಸಿದ್ದೆವು. ಆದರೆ ಪಕ್ಷ ಟಿಕೆಟ್ ನೀಡಿದ್ದು, ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ನನಗೆ ಟಿಕೆಟ್ ತಪ್ಪಿಸಲು ಕೆಲವರು ಯತ್ನಿಸಿದರು. ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಬಂಡಾಯ ಅಭ್ಯರ್ಥಿ ವಿರುದ್ಧ ನಾನು ಪ್ರತಿಕ್ರಿಯೆ ನೀಡಲಾರೆ. ಪ್ರಚಾರದಲ್ಲಿ ತೊಡಗಿರುವ ನಾನು ಹೋದಲ್ಲೆಲ್ಲ ಜನರು ನೀವು ಬರಬೇಡಿ, ಮತ ಹಾಕಿ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಗೆಲುವು ನನ್ನದೇ ಎಂದರು.
ಚುನಾವಣೆಯಲ್ಲಿ ದಲಿತರು ಎಡ-ಬಲ ಎಂದು ಸಂಘರ್ಷಕ್ಕೆ ಇಳಿಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಮಗನಿಗೆ ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ಈಶ್ವರಪ್ಪ ಅವರು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ನಾನು ದೊಡ್ಡವನಲ್ಲ. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ ಗರಡಿಯಲ್ಲಿ ಬೆಳೆದಿರುವ ನಾನು ಸಂಘ ಪರಿವಾರದ ಹಿನ್ನೆಲೆಯ ಈಶ್ವರಪ್ಪ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದರು.
ಅವರ ಮಗ ಕಾಂಗ್ರೆಸ್ ಪಕ್ಷದಲ್ಲಿ ಇರುವ ಕಾರಣ ಹಾಗೂ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ವಯಸ್ಸಾಗಿರುವುದರಿಂದ ರಾಜೀನಾಮೆ ನೀಡಿದ್ದಾರೆ ಎಂದರು.