ಮಾಸ್ಕೊ: ರಷ್ಯಾ ರಾಜಧಾನಿಯ ಹೊರವಲಯದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಗೃಹದಲ್ಲಿ ಹತ್ಯಾಕಾಂಡ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಶಂಕಿತ ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಎಂದು ರಷ್ಯಾ ಪ್ರಕಟಿಸಿದೆ. ಆರೋಪಿಗಳ ಜಾಡು ಹಿಡಿದು ಬಂಧಿಸಿ ಅವರಿಗೆ ಸೂಕ್ತ ಶಿಕ್ಷೆ ನೀಡುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಡೆದ ದಾಳಿಯ ಹೊಣೆಯನ್ನು ಐಸಿಸ್ ಹೊತ್ತಿದ್ದರೂ, ಈ ಘಟನೆಗೂ ಉಕ್ರೇನ್ ಗೂ ಇರಬಹುದಾದ ಸಂಬಂಧದ ಬಗ್ಗೆ ರಷ್ಯಾ ತನಿಖೆ ನಡೆಸುತ್ತಿದೆ. ಆದರೆ ಈ ದಾಳಿಯಲ್ಲಿ ತಮ್ಮ ಕೈವಾಡವೇನೂ ಇಲ್ಲ ಎಂದು ಉಕ್ರೇನ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಈ ಮಧ್ಯೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೧೩೩ಕ್ಕೇರಿದೆ ಎಂದು ರಷ್ಯಾದ ಸರ್ಕಾರಿ ತನಿಖಾ ಸಮಿತಿ ಹೇಳಿದೆ. ಆದರೆ ಸರ್ಕಾರಿ ಟಿವಿ ಸಂಪಾದಕಿ ಮಾರ್ಗರಿಟಾ ಸಿಮೋನ್ಯನ್ ಅವರ ಪ್ರಕಾರ ಸಾವಿನ ಸಂಖ್ಯೆ ೧೪೩ ಎನ್ನಲಾಗುತ್ತಿದೆ. ನಾಲ್ಕು ಮಂದಿ ಬಂದೂಕುಧಾರಿಗಳು ಸೇರಿದಂತೆ ೧೧ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಇವರು ಅಡಗಿಕೊಳ್ಳಲು ಮತ್ತು ಉಕ್ರೇನ್ ಗೆ ನುಸುಳಲು ಯತ್ನಿಸಿದ್ದರು. ಉಕ್ರೇನ್ ಗಡಿಯಲ್ಲಿ ನುಸುಳಲು ಇವರಿಗೆ ಗವಾಕ್ಷಿಯನ್ನು ನಿರ್ಮಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.