ಮಂಗಳೂರು ದಕ್ಷಿಣ ಕನ್ನಡ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರು ತಮ್ಮ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕೆಂಬ ಚುನಾವಣಾ ಆಯೋಗದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಸುಳ್ಯ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಹಾಗೂ ಕೃಷಿಕ ಎಂ.ವೆಂಕಪ್ಪ ಗೌಡರು, ನಾವು ರೈತರು. ನಮ್ಮ ಬೆಳೆ ರಕ್ಷಣೆಗಾಗಿ ನಾವು ಕೋವಿಯನ್ನು ಪಡೆದುಕೊಂಡಿದ್ದೇವೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಠೇವಣಿ ಇಡಬೇಕೆನ್ನುವ ಕ್ರಮ ಸರಿಯಲ್ಲ. ಅದರಿಂದ ವಿನಾಯಿತಿ ಕೊಡಬೇಕು ಎಂದು ಹೇಳಿದರಲ್ಲದೆ, ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಡಾನೆ ಸಹಿತ ಇತರ ಕಾಡು ಪ್ರಾಣಿಗಳು ತೋಟಕ್ಕೆ ಬಂದು ಕೃಷಿ ನಾಶ ಮಾಡುವ ಸಂದರ್ಭ ಅದನ್ನು ಓಡಿಸುವ ನಿಟ್ಟಿನಲ್ಲಿ ನಮಗೆ ಕೋವಿಯ ಅವಶ್ಯಕತೆ ಇದೆ. ಕೋವಿ ಠೇವಣಿ ಇಡುವ ಸಂದರ್ಭ ಬೆಳೆ ನಷ್ಟ ಆದರೆ ಅದರ ಹೊಣೆ ಹೊರುವವರು ಯಾರು. ಆ ಬಗ್ಗೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು? ಎಂದು ಹೇಳಿದರು.