ಲೇಹ್ : ನಾಜೂಕು ಪರಿಸರದ ಉಳಿವು ಮತ್ತು ೬ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಕಳೆದ ೨೧ ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮಾ.೨೬ರಂದು ಕೊನೆಗೊಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
೨೧ ದಿನಗಳ ಕಾಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಸತ್ಯಾಗ್ರಹ ನಡೆಸುತ್ತಿದ್ದರು. ನನ್ನ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರೂ ಕೂಡ, ಹೋರಾಟ ಮುಂದುವರಿಯಲಿದೆ ಎಂದು ಸೋನಮ್ ವಾಂಗ್?ಚುಕ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಇವರ ಹೋರಾಟಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳಿಗಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಳಾ ಸಂಘಟನೆಗಳು ಘೋಷಿಸಿವೆ.
ಮಾರ್ಚ್ ೬ರಂದು ಸೋನಮ್ ವಾಂಗ್ ಚುಕ್ ತಮ್ಮ ಉಪವಾಸವನ್ನು ಪ್ರಾರಂಭಿಸಿದ್ದರು. ೨೧ ದಿನಗಳವರೆಗೆ ಸತ್ಯಾಗ್ರಹ ನಡೆಸುತ್ತೇನೆ. ಕೇಂದ್ರ ಸರ್ಕಾರವು ಒಂದು ವೇಳೆ ನಮ್ಮ ಮನವಿಗೆ ಓಗೊಡದಿದ್ದರೆ, ನನ್ನ ಹೋರಾಟವನ್ನು ಸಾವಿನವರೆಗೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲೂಬಹುದು ಎಂದು ಹೇಳಿದ್ದರು.