ಧಾರವಾಡ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 7 ರಂದು ಜರುಗಲಿರುವ ಮತದಾನ ಈ ಬಾರಿ ಶೇಕಡ 100 ರಷ್ಟು ಆಗುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸ್ವೀಪ್ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಅವರು ತಿಳಿಸಿದರು.
ಅವರು ಇಂದು ಸಂಜೆ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಎಲ್ಲಾ ಮತಕ್ಷೇತ್ರಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ವಿವಿಧಡೆ ಹಲವಾರು ರೀತಿಯ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. 6 ವಾರಗಳ ಕಾಲಾವಧಿಯಲ್ಲಿ ್ಲ ಮತದಾರರನ್ನು ಸೆಳೆಯಲು ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ, ಎಲ್ಲಾ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಮಹಾನಗರ ಪಾಲಿಕೆಗಳ ವಾರ್ಡ್‍ಗಳಲ್ಲಿ ಮತ್ತು ಗ್ರಾಮಗಳಲ್ಲಿ ಮತದಾರರ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶೇ 50 ಕ್ಕಿಂತ ಕಡಿಮೆ ಮತದಾನವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 71 ಮತ್ತು 73 ಮತಕ್ಷೇತ್ರಗಳ 6 ಮತಗಟ್ಟೆಗಳು, ಕಲಘಟಗಿ ಪಟ್ಟಣದ 2 ಮತಗಟ್ಟೆಗಳು ಮತ್ತು ಶಿಗ್ಗಾಂವ ಮತಕ್ಷೇತ್ರ ವ್ಯಾಪ್ತಿಯ 1 ಮತಗಟ್ಟೆ ಸೇರಿದಂತೆ ಒಟ್ಟು 9 ಮತಗಟ್ಟೆಗಳಲ್ಲಿ ಮತದಾನ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮತಗಟ್ಟೆ 102 ಹಾಗೂ 163 ಗುಲಗಂಜಿಕೊಪ್ಪ, 146 ಮಾಳಪುರ, 184 ಕೃಷಿ ವಿಶ್ವವಿದ್ಯಾಲಯ, 154 ಕೆಶವಾಪುರ, 107 ಕಿಮ್ಸ್, 48 ಅಳ್ನಾವರ, 106 ಅರೆಬಸವನಕೊಪ್ಪ ಹಾಗೂ ಶಿಗ್ಗಾಂವಿಯ 109 ಗಂಗಿಬಾವಿ ಈ ಮತಗಟ್ಟೆಯಲ್ಲಿ ಮತದಾರರನ್ನು ಸೇಳೆಯಲು ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣ ಬಳಸಿ ಯುವಕರನ್ನು ಮತದಾನಕ್ಕೆ ಪ್ರೇರೇಪಿಸುವುದು. ಸೆಲ್ಫಿ ವೀಡಿಯೋಸ್ ಸ್ಪರ್ಧೆ, ಕಾಲೇಜುಗಳಲ್ಲಿ ಅಂಬಾಸಿಡರ್ ಆಯ್ಕೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಹಾಸ್ಯ ಕಲಾವಿದರನ್ನು ಸಹ ಬಳಸಿಕೊಳ್ಳಲಾಗುವುದೆಂದರು. ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಸ್ವೀಪ್ ಸಮಿತಿಗಳನ್ನು ರಚಿಸಲಾಗಿದ್ದು, ಮಾರ್ಚ್ 26 ರಿಂದ 30 ರ ವರೆಗಿನ 6 ವಾರಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.