ರಾಮನಗರ: ಡಾ. ಬಾಬು ಜಗಜೀವನರಾಂ ಅವರ ೧೧೭ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ ೫ ರಂದು ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೩ನೇ ಜನ್ಮದಿನಾಚರಣೆಯನ್ನು ಏಪ್ರಿಲ್ ೧೪ರಂದು ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಏಪ್ರಿಲ್ ೫ ರಂದು ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಹಾಗೂ ಏಪ್ರಿಲ್ ೧೪ ರಂದು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಚರಿಸಲು ಕಾರ್ಯಕ್ರಮದ ಸಿದ್ದತೆ ಕುರಿತು ವೇದಿಕೆ, ಶಾಮಿಯಾನ, ಆಸನ ವ್ಯವಸ್ಥೆ ಕುರಿತಂತೆ ಅಗತ್ಯ ಸಿದ್ದತೆ ಕೈಗೊಳ್ಳಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯುತ್‌ನಲ್ಲಿ ಯಾವುದೇ ಆಡಚಣೆಯಾಗದಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಕುಡಿಯುವ ನೀರು ಒದಗಿಸುವಂತೆ ಹಾಗೂ ಆಯಾ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯಕ್ರಮದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನೆರವೇರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಲಾತಂಡಗಳ ಮೆರವಣಿಗೆ, ಮಹನೀಯರ ಕುರಿತು ಉಪನ್ಯಾಸ ನೀಡಲು ಉಪನ್ಯಾಸಕರ ನೇಮಕ, ಅತೀ ಹೆಚ್ಚು ಅಂಕ ಪಡೆದಿರುವ ಮಕ್ಕಳಿಗೆ ಸನ್ಮಾನ ಮಾಡುವುದು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕಿರುಹೊತ್ತಿಗೆಗಳನ್ನು ನೀಡುವಂತೆ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜದೇವಿ, ಸಮುದಾಯದ ಮುಖಂಡರುಗಳಾದ ಚೆಲುವರಾಜು, ಶಿವಲಿಂಗಯ್ಯ, ಡಾ.ಗೋವಿಂದಯ್ಯ, ಪುಟ್ಟಸ್ವಾಮಿ, ಮಲ್ಲಿಕಾರ್ಜುನ್, ಸಾಗರ್, ಚನ್ನಪಟ್ಟಣ ಶ್ರೀನಿವಾಸ್, ಪುನೀತ್ ಹಾಗೂ ಇತರರು ಉಪಸ್ಥಿತರಿದ್ದರು.