ರಾಮನಗರ: ಕುವೆಂಪು ಅವರಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೂರರ ಸ್ಥಾನ ತುಂಬುವ ಶಕ್ತಿಯಿದೆ ಎಂದು ಖ್ಯಾತ ವಿಮರ್ಶಕರು ಹಾಗೂ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಆಶಾದೇವಿ ಅವರು ತಿಳಿಸಿದರು.
ಅವರು ಇಂದು ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ರಾಮನಗರ ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ಅಧ್ಯಯನ ವಿಭಾಗದ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕುವೆಂಪು ಬರಹಗಳು: ಸಂಸ್ಕೃತಿ ಮತ್ತು ವೈಚಾರಿಕತೆ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರು ಸಾಮಾಜಿಕವಾಗಿ ಬದ್ದತೆಯನ್ನು ಹೊಂದಿದ್ದ ವೈಜ್ಞಾನಿಕ ಮನೋಭಾವನೆ ಉಳ್ಳವರಾಗಿದ್ದರು, ಅದಕ್ಕೆ ಅವರು ಬರೆದಿರುವ ಅನೇಕ ಕೃತಿಗಳೆ ಉದಾಹರಣೆಯಾಗಿವೆ. ಸಾಮಾಜಿಕ ಪಿಡುಗುಗಳ ವಿರುದ್ದ ನಾವೆಲ್ಲಾರೂ ಕಟುವಾಗಿ ವಿರೋಧಿಸಬೇಕು ಸಾಮಾಜಿಕ ಸಾಂಸ್ಕೃತಿಕ ಸ್ವಾವಲಂಬಿಗಳಾಗಬೇಕು ಎಂದು ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ದತಿಯನ್ನು ಜಾರಿಗೆ ತಂದು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಶ್ವಮಾನವರಾಗಿ ಎಂದು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.
ರಾಮನಗರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಡೊಮಿನಿಕ್ ಅವರು ಮಾತನಾಡಿ, ಕುವೆಂಪು ಅವರು ಅನೇಕ ಕ್ರಾಂತಿಗಳಿಗೆ ತಮ್ಮ ಕೃತಿಗಳ ಮುಖಾಂತರ ಪ್ರೇರಣೆ ನೀಡಿದರು, ಅವರು ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯ ಮುಖಾಂತರ ಜನತೆಯಲ್ಲಿ ವೈಜ್ಞಾನಿಕ ಕ್ರಾಂತಿಯನ್ನು ಬೆಳೆಸಿದವರು ಇಂದಿನ ಸನ್ನಿವೇಶಕ್ಕೆ ಪ್ರಸ್ತುತವಾಗುತ್ತಾರೆ. ತಂತ್ರಜ್ಞಾನವೆಂಬುವುದು ಪುಕ್ಕಟೆಯಾಗಿ ಎಲ್ಲರಿಗೂ ದೊರಕಬೇಕು ಎಂದು ಹೇಳಿದವರಲ್ಲಿ ಕುವೆಂಪು ಮೊದಲಿಗರು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಶ್ರೀರಂಗನಾಥ್, ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಚ್.ಡಿ. ಉಮಾಶಂಕರ್, ಡಾ. ರಾಜು ಗುಂಡಾಪುರ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಡಾ. ಚಲಪತಿ ಆರ್. ಸೇರಿದಂತೆ ಇತರರು ಉಪಸ್ಥಿತರಿದ್ದರು.