ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡಜನತೆಗೆ ಅನುಕೂಲ ಕಲ್ಪಿಸಿರುವ ಕಾಂಗ್ರೆಸ್ ಸರ್ಕಾರ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಗೆ ಶಾಶ್ವತ ಪರಿಹಾರ ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಲಿದೆ ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್‌ಚಂದ್ರು)ರವರಿಗೆ ಮತ ನೀಡಬೇಕು ಎಂದು ಕೃಷಿ ಸಚಿವರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದಲ್ಲಿ ಎರಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ೭ರಲ್ಲಿ ಕಾಂಗ್ರೆಸ್ ಶಾಸಕರಿದ್ದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮುಂದೆ ಕುಮಾರಸ್ವಾಮಿಯವರು ಸಂಸತ್ ಸದಸ್ಯರಾಗಿ ಅಭಿವೃದ್ದಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳು ಮೈಸೂರು ಜಿಲ್ಲೆಗೆ ಸೇರಿದ್ದರೂ ಸಹ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ಪ್ರತಿ ತಿಂಗಳ ಕೊನೆಯ ಶನಿವಾರ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಅಹವಾಲು ಆಲಿಸಲಾಗುತ್ತದೆ ಎಂದು ಭರವಸೆ ನೀಡಿದರು.
೨೦೧೮ರ ಚುನಾವಣಾ ಪೂರ್ವದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಹಾಕದಿದ್ದರೆ ಇಲ್ಲಿ ರವಿಶಂಕರ್ ಶಾಸಕರಾಗುತ್ತಿದ್ದರು ಇಂತಹಾ ಲೋಪ ಮಾಡಿದರೂ ಸಹ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿತ್ತು ಇದನ್ನು ಉಳಿಸಿಕೊಳ್ಳುವಲ್ಲಿ ಹೆಚ್‌ಡಿಕೆ ವಿಫಲಗೊಂಡರು ಎಂದು ಮಾಹಿತಿ ನೀಡಿದರು. ಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೆ ತಂದು ರಾಜ್ಯದ ಜನತೆಗೆ ಉಪಯೋಗ ಮಾಡಿರುವ ಕಾಂಗ್ರೆಸ್ ಪಕ್ಷದ ಪರವಾಗಿ ಶೇ.೮೦ರಷ್ಟು ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಈ ಬಗ್ಗೆ ನಾವು ಮಾಡಿಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ ಆದ್ದರಿಂದ ಮತದಾರರು ಜಾತಿಗೆ ಮತ್ತು ಅನುಕಂಪಕ್ಕೆ ಆದ್ಯತೆ ನೀಡದೆ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ತುಂಬಲು ಏ.೨೬ರಂದು ನಡೆಯುವ ಚುನಾವಣೆಯಲ್ಲಿ ಸ್ಟಾರ್‌ಚಂದ್ರು ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ದಿ ಕಾಮಗಾರಿಗಳಿಗೆ ನಮ್ಮ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು ಕ್ಷೇತ್ರದ ಅಭಿವೃದ್ದಿಗಾಗಿ ೫೦೦ ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಲೋಕಸಭಾ ಚುನಾವಣೆಯ ಮುಗಿದ ನಂತರ ಎಲ್ಲಾ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂವಿಧಾನದ ಆಶಯದಂತೆ ಬಡ ಜನತೆಯ ಪರವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಜ್ಯದ ಉದ್ದಾರಕ್ಕಾಗಿ ದುಡಿಯುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಸ್ಪೂರ್ತಿ ನೀಡುವ ಸಲುವಾಗಿ ಸ್ಟಾರ್ ಚಂದ್ರುರವರಿಗೆ ಮತ ನೀಡಬೇಕು ಎಂದು ಕೋರಿದ ಶಾಸಕ ಡಿ.ರವಿಶಂಕರ್ ಇವರ ಗೆಲುವಿನಿಂದ ನನಗೂ ಅನುಕೂಲವಾಗಲಿದೆ ಎಂದರು. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಮಧು.ಜಿ.ಮಾದೇಗೌಡ, ದಿನೇಶ್‌ಗೂಳಿಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಮುಖಂಡ ಎಸ್.ಬಿ.ತಮ್ಮಯ್ಯ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯರಾದ ರಾಜಯ್ಯ, ಸಿದ್ದಪ್ಪ, ಜಿ.ಆರ್.ರಾಮೇಗೌಡ, ಮಾರ್ಚಳ್ಳಿಶಿವರಾಮು, ತಾ.ಪಂ. ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜುನಾಥ್, ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಗೀತಾಮಹೇಶ್, ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಸೈಯದ್ ಸಿದ್ದಿಕ್, ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಸದಸ್ಯೆ ಸರಿತಾಜವರಪ್ಪ, ಮುಖಂಡರಾದ ವೈ.ಎಸ್.ಜಯಂತ್, ಡಾ.ಸಂದೇಶ್, ಜಿ.ಎಸ್.ವೆಂಕಟೇಶ್, ಕಲ್ಲಹಳ್ಳಿಶ್ರೀನಿವಾಸ್, ನೀಲಕಂಠೇಗೌಡ, ಕೆ.ಎಲ್.ಜಯರಾಮು, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಹೆಚ್.ನಾಗೇಂದ್ರ, ಕೆಂಚಿಮಂಜು, ಎಸ್.ಸಾಗರ್ ಮತ್ತಿತರರು ಹಾಜರಿದ್ದರು.